

ಬೆಂಗಳೂರು: ಜಟ್ಟ ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದ ಕೆಲಸಗಳು ಚುರುಕುಗೊಂಡಿವೆ. ವಿಜಯದಶಮಿ ದಿನದಂದು ಸೆಟ್ಟೇರುವ ಈ ಸಿನಿಮಾಗೆ ‘ಕನ್ನಡಿಗ’ ಎಂಬ ಶೀರ್ಷಿಕೆ ಇಡಲಾಗಿದೆ. ಲಿಪಿಕಾರ ಗುಣಭದ್ರನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಥರಹದ ವೇಷ ತೊಟ್ಟಿದ್ದು, ಇತ್ತೀಚೆಗಷ್ಟೇ ಅವರ ಆ ಲುಕ್ ಹೊರಬಿದ್ದಿತ್ತು. ಇದೀಗ ಮತ್ತೊಂದು ಲುಕ್ ಕುತೂಹಲ ಮೂಡಿಸುತ್ತಿದೆ.
ಲಿಪಿಕಾರ ಗುಣಭದ್ರನ ಪೂರ್ವಜ ಸಮಂತಭದ್ರನ ಅವತಾರದಲ್ಲಿ ರವಿಚಂದ್ರನ್ ಎಂಟ್ರಕೊಟ್ಟಿದ್ದು, ವಾರಿಯರ್ ಲುಕ್ನಲ್ಲಿ ಪಾತ್ರವನ್ನು ನಿರ್ದೇಶಕರು ಸೃಷ್ಟಿ ಮಾಡಿದ್ದಾರೆ. ಚೆನ್ನಭೈರಾದೇವಿ ಸೇನೆಯ ಮುಖ್ಯಸ್ಥನಾಗಿ ರವಿಚಂದ್ರನ್ ಅವರ ಪಾತ್ರ ತೆರೆದುಕೊಳ್ಳಲಿದೆ. ಭವಾನಿ ಪ್ರಕಾಶ್ ಮಹಾರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಯುದ್ಧದ ಭಾಗ ಬಾಕಿ ಇದೆ.
ಇದೇ ಚಿತ್ರದಲ್ಲಿ ಮತ್ತೊಂದು ವಿಶೇಷ ಪಾತ್ರ ಮಾಡಲಿರುವ ಜೇಮಿ ಅಲ್ಟರ್ ಸಹ ಈಗಾಗಲೇ ತಂಡ ಸೇರಿಕೊಂಡಿದ್ದು, ಸಾಗರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 1850ರ ಬ್ರಿಟಿಷ್ ಮತ್ತು ಪೋರ್ಚುಗೀಸರ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಕನ್ನಡದ ವಿದ್ವಾಂಸನಾಗಿ ರವಿಚಂದ್ರನ್ ಕಾಣಿಸಿದರೆ, ಖ್ಯಾತ ನಟ ಟಾಮ್ ಅಲ್ಟರ್ ಅವರ ಪುತ್ರ ಜೇಮಿ ಅಲ್ಟರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿ, ಜಾರ್ಜ್ ಫರ್ಡಿನಾಂಡ್ ಕಿಟೆಲ್ ಪಾತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಎಂ.ಜಿ.ಶ್ರೀನಿವಾಸ್-ರಂಜನಿ ರಾಘವನ್ ‘ವೆಟರನ್’
ಒಂದಷ್ಟು ಅಧ್ಯಯನ ನಡೆಸಿ, ನೈಜ ಘಟನೆಯೊಂದನ್ನು ಸಿನಿಮಾ ಮೂಲಕ ತೆರೆಮೇಲೆ ತರುವ ಪ್ರಯತ್ನವಿದು. ಬರಹಗಾರನ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ, ಕನ್ನಡ ಭಾಷೆಯ ಉಳಿವಿಗಾಗಿ ಹೇಗೆ ಶ್ರಮಿಸುತ್ತಾನೆ ಎಂಬುದೇ ಈ ಚಿತ್ರದ ಕಥೆ’ ಎಂದು ನಿರ್ದೇಶಕರು ಈ ಹಿಂದೆಯೇ ಹೇಳಿಕೊಂಡಿದ್ದರು. ಈಗಾಗಲೇ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿದಿದ್ದು, ಸದ್ಯ ಶಿವಮೊಗ್ಗದ ಸಾಗರದಲ್ಲಿ ಬೀಡು ಬಿಟ್ಟಿದ್ದಾರೆ. ಒಂದಷ್ಟು ಸೆಟ್ಗಳನ್ನೂ ಈ ಚಿತ್ರಕ್ಕಾಗಿ ಸಿದ್ಧಪಡಿಸಲಾಗಿದೆ.