

ಬೆಂಗಳೂರು: ಧನಂಜಯ್ ನಾಯಕನಾಗಿ ನಟಿಸುತ್ತಿರುವ ‘ಹೆಡ್ ಬುಷ್’ ಚಿತ್ರಕ್ಕೆ ಒಬ್ಬರಾದ ಮೇಲೋಬ್ಬರು ಸೇರ್ಪಡೆಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ‘ಲೂಸ್ ಮಾದ’ ಯೋಗಿ ತಂಡ ಸೇರಿಕೊಂಡಿದ್ದರು. ವಸಿಷ್ಠ ಸಿಂಹ, ಶ್ರುತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸಹ ಚಿತ್ರದ ಭಾಗವಾಗಿದ್ದರು. ಇದೀಗ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಎಂಟ್ರಿಕೊಟ್ಟಿದ್ದಾರೆ. ಹಾಗಾದರೆ, ರೌಡಿಸಂ ಹಿನ್ನೆಲೆಯುಳ್ಳ ಈ ಚಿತ್ರದಲ್ಲಿ ರವಿಚಂದ್ರನ್ ಪಾತ್ರ ಎಂಥದ್ದು? ಈ ಪ್ರಶ್ನೆಗೂ ಉತ್ತರ ಸಿಕ್ಕಿದೆ. ‘ಹೆಡ್ ಬುಷ್’ನಲ್ಲಿ ಪ್ರಾಧ್ಯಾಪಕರಾಗಿ ರವಿಚಂದ್ರನ್ ಪಾತ್ರ ಸಾಗಲಿದೆಯಂತೆ. ಇನ್ನೇನು ಶೀಘ್ರದಲ್ಲಿ ಶೂಟಿಂಗ್ನಲ್ಲಿಯೂ ಅವರು ಭಾಗಿಯಾಗಲಿದ್ದಾರೆ.
ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನವ ನಿರ್ದೇಶಕ ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಬಂಡವಾಳ ಹೂಡುತ್ತಿವೆ. ಆಗಸ್ಟ್ 09ರಿಂದ ಮೊದಲ ಹಂತದ ಚಿತ್ರೀಕರಣ ಶುರುವಾಗಿದ್ದು, ಆ. 23ಕ್ಕೆ ಬಿಡುಗಡೆ ಆಗಿದ್ದ ಫಸ್ಟ್ ಲುಕ್ ಮೂಲಕವೇ ಕುತೂಹಲ ಮೂಡಿಸಿತ್ತು. ಈ ಚಿತ್ರದಲ್ಲಿ ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಅವರ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ವಣವಾಗುತ್ತಿರುವ ಈ ಸಿನಿಮಾ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ನಲ್ಲಿಯೂ ಬಿಡುಗಡೆ ಆಗಲಿದೆ.