ಹೊಗಳಿಕೆಯೂ ಬೇಕು, ತೆಗಳಿಕೆಯೂ ಇರಬೇಕು..; ಮಗನ ಸಿನಿ ಬದುಕಿನ ಬಗ್ಗೆ ರವಿಚಂದ್ರನ್ ಮಾತು

Ravichandran
Published on
ರವಿಚಂದ್ರನ್ ಮಗ ಮನುರಂಜನ್ ಅಭಿನಯದ ಮೂರನೇ ಚಿತ್ರ ‘ಮುಗಿಲ್​ಪೇಟೆ’ ಇಂದು (ನ. 19) ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಆರಂಭದಿಂದಲೂ ಮನು ಸಾಕಷ್ಟು ಮಾತಾಡಿದ್ದಾರೆ. ರವಿಚಂದ್ರನ್ ಈ ಚಿತ್ರದ ಬಗ್ಗೆ ಬಿಡಿ, ಹಿಂದಿನ ಎರಡು ಚಿತ್ರಗಳ ಬಗ್ಗೆಯೂ ಮಾತಾಡಿರಲಿಲ್ಲ. ಎಲ್ಲೂ ಸಹ ಮನು ವೃತ್ತಿಜೀವನದ ಬಗ್ಗೆ, ಚಿತ್ರಗಳ ಬಗ್ಗೆ, ಇಡುತ್ತಿರುವ ಹೆಜ್ಜೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಹೇಗಿರಬೇಕು, ಏನಾಗಬಾರದು ಎಂದು ಹೇಳಿದ್ದಾರೆ. ಆ ಮಾತುಗಳನ್ನು ಅವರ ಬಾಯಲ್ಲೇ ಕೇಳಿ...

‘ನಮ್ಮಪ್ಪ ನನಗೆ ಏನೂ ಮಾಡುವುದಕ್ಕೆ ಬಿಡುವುದಿಲ್ಲ, ಅದು ಮಾಡು, ಇದು ಮಾಡು ಎನ್ನುತ್ತಾನೆ ಎಂದು ಎಲ್ಲ ಮಕ್ಕಳಿಗೂ ಅನಿಸುತ್ತದೆ. ಅವನು ಹಾಗೆ ಮಾಡುವುದು ಪ್ರೀತಿಯಿಂದಲೇ ಹೊರತು ಬೇರ್ಯಾವ ಕಾರಣದಿಂದಲೂ ಅಲ್ಲ ಎಂದು ಅವರಿಗೆ ಅರ್ಥವಾಗುವುದಿಲ್ಲ. ಈ ವಿಷಯವಾಗಿ, ಅಪ್ಪನ ಬಗ್ಗೆ ಮಕ್ಕಳಿಗೆ ಕೋಪ ಬಂದರೆ, ಅಪ್ಪ ತನ್ನ ಜವಾಬ್ದಾರಿ ಚೆನ್ನಾಗಿ ನಿರ್ವಹಿಸಿದ್ದಾನೆ ಎಂದರ್ಥ. ನನಗೆ ನನ್ನ ಮಗನನ್ನು ಲಾಂಚ್ ಮಾಡಬೇಕು ಅಂತ ಬಹಳ ಆಸೆ ಇತ್ತು. ಆದರೆ, ಕಾರಣಾಂತರಗಳಿಂದ ಅದು ತಡವಾಗುತ್ತಾ ಹೋಯಿತು. ಅದೊಂದು ದಿನ ಬಂದು, ‘ಹೊರಗಿನಿಂದ ಅವಕಾಶಗಳು ಬರುತ್ತಿವೆ, ಒಪ್ಪಿಕೊಳ್ಳಲಾ?’ ಎಂದ, ಹೊರಗೆ ಬಹಳ ಕಷ್ಟ ಇದೆ. ಸಾಕಷ್ಟು ಅನುಭವಿಸಬೇಕಾಗುತ್ತದೆ ಎಂದೆ. ಪರವಾಗಿಲ್ಲ ಎಂದ. ‘ನಾನು ಸಹ ಸಂಪಾದನೆ ಮಾಡಬೇಕು, ಮನೆಗೆ ನೆರವಾಗಬೇಕು’ ಎಂದ. ಆಗ ಮಗ ಬೆಳೆದಿದ್ದಾನೆ ಎಂದೆನಿಸಿತು. ಎರಡು ಚಿತ್ರಗಳನ್ನು ಮಾಡಿದ. ಈ ಚಿತ್ರದ ವಿಶೇಷವೆಂದರೆ, ಅವನ ತಮ್ಮ-ತಂಗಿ ತಮ್ಮದೇ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಾನು ಚಿತ್ರ ನೋಡಿಲ್ಲ. ಇದುವರೆಗೂ ಕಥೆ ಸಹ ಕೇಳಿಲ್ಲ. ಅವರೂ ಏನೂ ಹೇಳಿಲ್ಲ. ಏಕೆಂದರೆ, ಅಪ್ಪನ ಬಾಯಿ ಸರಿ ಇಲ್ಲ, ಕಥೆ ಹೇಳಿದರೆ ಏನಾದರೂ ಹೇಳಬಹುದು ಎಂಬ ಭಯ ಅವರಿಗೂ ಇರಬಹುದು. ಆದರೆ, ನಾನು ಹೇಳೋದು ಒಂದೇ ಮಾತು. ಸಿನಿಮಾ ಅಂದರೆ ಸುಲಭ ಅಲ್ಲ. ಅಲ್ಲಿ ಕಥೆ ಮುಖ್ಯ. ಎಮೋಷನ್ಸ್ ಗಳು ಬಹಳ ಮುಖ್ಯ. ನಾನು ಚಿತ್ರರಂಗಕ್ಕೆ ಬಂದು ‘ಕ್ರೇಜಿಸ್ಟಾರ್’ ಆಗಿದ್ದು ಒಬ್ಬನಿಂದಲ್ಲ. ಪಕ್ಕದಲ್ಲಿರುವ ಕಲಾವಿದರಿಂದ. ನಮ್ಮನ್ನು ಸ್ಟಾರ್ ಮಾಡುವುದು ಅವರೇ. ಒಬ್ಬ ಹೀರೋ ತಾನಾಗಿ ಹೀರೋ ಆಗುವುದಕ್ಕೆ ಸಾಧ್ಯವೇ ಇಲ್ಲ. ‘ಪ್ರೇಮಲೋಕ’ ಮಾಡಿದ್ದು ನಾನೊಬ್ಬನಲ್ಲ. ಅದರಲ್ಲಿ ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ಶ್ರೀನಾಥ್, ಲೋಕೇಶ್ ಎಲ್ಲರೂ ಇದ್ದರು. ಎಲ್ಲರೂ ಸೇರಿದ್ದರಿಂದ ಆ ಚಿತ್ರ ಆಯಿತು. ಮನು ಒಬ್ಬ ಸ್ಟಾರ್ ಅಲ್ಲ, ಅವನೊಬ್ಬ ನಟ ಮಾತ್ರ. ಅವನು ಕಲಿಯುವುದು ಸಾಕಷ್ಟಿದೆ. ತಿದ್ದಿಕೊಳ್ಳುವುದು ಸಾಕಷ್ಟಿದೆ. ಹೊಗಳಿಸಿಕೊಳ್ಳಬೇಕು, ತೆಗಳಿಸಿಕೊಳ್ಳಬೇಕು. ಎಲ್ಲ ಆದರೆ ಮಾತ್ರ ಅವನು ಬೆಳೆಯಲು ಸಾಧ್ಯ. ಅದೇ ಕಾರಣಕ್ಕೆ ಚಿತ್ರಕ್ಕೆ ನೀನೇ ಡಬ್ಬಿಂಗ್ ಮಾಡು ಎಂದು ಹೇಳಿದೆ. ಒಂದಿಷ್ಟು ತಪು್ಪಗಳಾಗಬಹುದು, ಕಲಿಯುವುದಕ್ಕೆ ಒಂದೊಳ್ಳೆಯ ಅವಕಾಶ ಅದು. ಆ ಕೆಲಸವನ್ನು ಮಾಡು ಅಂತ ಹೇಳಿದ್ದೇನೆ. ಮುಂಚೆ ಅವನೊಬ್ಬನೇ ಇದ್ದ. ಈಗ ಅವನ ತಮ್ಮ ಸಹ ಜತೆಗೆ ಸೇರಿಕೊಂಡಿದ್ದಾನೆ. ಮನು ಸಂಕೋಚದವನು. ವಿಕ್ಕಿ ನುಗ್ಗುತ್ತಾನೆ. ಇಬ್ಬರೂ ಜತೆಗೆ ಸೇರಿದರೆ ಚೆನ್ನಾಗಿರುತ್ತದೆ. ಅವರಿಬ್ಬರನ್ನೂ ನೋಡಿ, 60 ವರ್ಷ ಪೂರೈಸಿರುವ ನಮ್ಮ ಈಶ್ವರಿ ಸಂಸ್ಥೆಗೆ 100 ವರ್ಷ ನಡೆಯುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದನಿಸಿತು. ಇಬ್ಬರೂ ಒಟ್ಟಿಗೆ ಸೇರಿದರೆ, ಏನೋ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಇನ್ನು, ನಾನು ಚಿತ್ರ ನೋಡಿಲ್ಲ. ಬಿಡುಗಡೆಯಾದ ಮೇಲೆ ಚಿತ್ರಮಂದಿರದಲ್ಲೇ ಜನರ ಮಧ್ಯೆ ಕುಳಿತು ನೋಡುತ್ತೇನೆ. ಚಿತ್ರ ಚೆನ್ನಾಗಿದ್ದರೆ ಜನ ಖಂಡಿತಾ ನೋಡುತ್ತಾರೆ. ನಾನು ಕೇಳೋದು ಒಂದೇ ಮಾತು. ನನಗೆ ಕೊಟ್ಟ ಪ್ರೀತಿಯನ್ನು ನನ್ನ ಮಕ್ಕಳಿಗೂ ಹಂಚಿ...

ವೀಕ್ ಆಗಿಬಿಟ್ಟಿದ್ದೇನೆ...

ಪುನೀತ್ ನಿಧನದಿಂದ ರವಿಚಂದ್ರನ್ ವಿಚಲಿತರಾಗಿದ್ದಾರೆ. ಪುನೀತ್ ನಿಧನದ ನಂತರ ಎಲ್ಲೂ ಮಾತನಾಡದ ರವಿಚಂದ್ರನ್, ‘ಮುಗಿಲ್​ಪೇಟೆ’ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿದ್ದಾರೆ. ‘ಇಷ್ಟು ವರ್ಷಗಳಲ್ಲಿ ಸಾಕಷ್ಟು ನೋವುಂಡಿದ್ದೇನೆ. ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ಎಂದೂ ನಾನು ವೀಕ್ ಅನಿಸಿರಲಿಲ್ಲ. ಆದರೆ, ಅಪು್ಪ ನಿಧನದ ನಂತರ ದುರ್ಬಲನಾಗಿದ್ದೇನೆ ಎಂದೆನಿಸುತ್ತಿದೆ. ಅಂದು ನಾನು ಅಲ್ಲೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ದೃಶ್ಯ 2’ ಚಿತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದೆ. ಯಾಕೋ ಮನಸ್ಸು ಸರಿ ಇರಲಿಲ್ಲ. ಅಲ್ಲಿಂದ ಹೊರಟೆ. ವಿಕ್ರಮ್ ಆಸ್ಪತ್ರೆಯ ಹತ್ತಿರ ಬಹಳ ಜನ ಇದ್ದರು. ಏನು ಎಂದು ವಿಚಾರಿಸಿದಾಗ ಅಪು್ಪಗೆ ಹಾರ್ಟ್ ಅಟ್ಯಾಕ್ ಆದ ಸುದ್ದಿ ಹೇಳಿದರು. ಅಷ್ಟರಲ್ಲಿ ಮನೆಯಿಂದ ಹೆಂಡತಿಯ ಫೋನ್ ಬಂತು. ಅಮ್ಮನಿಗೆ ಹುಷಾರಿಲ್ಲ ಎಂದು ಹೇಳಿದರು. ತಕ್ಷಣವೇ ಆಸ್ಪತ್ರೆಗೆ ಹೋಗಿ ಎಂದು ನಾನು ವಿಕ್ರಮ್ ಆಸ್ಪತ್ರೆಗೆ ಹೋದೆ. ಅಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಬಹಳ ಹೊತ್ತು ಸುಮ್ಮನೆ ನಿಂತುಬಿಟ್ಟಿದ್ದೆ. ಪುನೀತ್ ಹಣೆಗೆ ಮುತ್ತಿಟ್ಟು ಹೊರಬಂದೆ. ಎಷ್ಟೇ ನೋವಿದ್ದರೂ, ಮಾತಾಡುತ್ತಾ ಅದನ್ನು ಹೊರಗೆ ಹಾಕುತ್ತೇವೆ. ಆದರೆ, ಅಪು್ಪ ನಿಧನರಾಗಿ ಇಷ್ಟು ದಿನ ಆಯಿತು. ಆ ದುಃಖ ಕಡಿಮೆಯಾಗುತ್ತಿಲ್ಲ. ಅವನ ನಗು, ಮುಗ್ಧತೆ ಮರೆಯೋಕೆ ಆಗುತ್ತಿಲ್ಲ. ಅವನು ತಮ್ಮ ಜೀವನದ ಮೂಲಕ ಎಲ್ಲರಿಗೂ ದೊಡ್ಡ ಸಂದೇಶ ಬಿಟ್ಟು ಹೋಗಿದ್ದಾನೆ’ ಎಂದು ಭಾವುಕರಾಗಿ ನುಡಿದರು ರವಿಚಂದ್ರನ್. ಪುನೀತ್ ಅಭಿನಯದ ಬಹಳಷ್ಟು ಚಿತ್ರಗಳ ಮುಹೂರ್ತದಲ್ಲಿ ರವಿಚಂದ್ರನ್ ಭಾಗವಹಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು. ಅಷ್ಟೇ ಅಲ್ಲ, ರವಿಚಂದ್ರನ್ ನಿರ್ದೇಶನದಲ್ಲಿ ನಟಿಸಬೇಕು ಎಂಬ ಆಸೆ ಪುನೀತ್ ಅವರಿಗಿತ್ತಂತೆ. ಅದನ್ನು ತಮ್ಮ ಕುಟುಂಬದವರ ಜತೆಗೆ ಹೇಳಿಕೊಂಡಿದ್ದರಂತೆ. ‘ಕೊನೆಗೂ ಅವನನ್ನು ನಿರ್ದೇಶಿಸುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು, ಅಪು್ಪ ಜತೆಗೆ ‘ದ್ವಿತ್ವ’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ವಿಳಂಬವಾಗುತ್ತಲೇ ಹೋಯಿತು. ಫೋಟೋಶೂಟ್ ಆಗಬೇಕಿತ್ತು. ಅದೂ ಆಗಲಿಲ್ಲ. ಪುನೀತ್​ಗೆ ನಾವು ಒಳ್ಳೆಯ ಗೌರವ ಸಲ್ಲಿಸಬೇಕೆಂದರೆ, ಅವರ ಹೆಸರಿನಲ್ಲಿ ಒಂದು ಸ್ಟುಡಿಯೋ ಮಾಡಿ. ಅಲ್ಲಿ ನಿರಂತರವಾಗಿ ಸಿನಿಮಾ ಚಟುವಟಿಕೆಗಳು ನಡೆಯುತ್ತಿದ್ದರೆ, ಅಪು್ಪ ಎನ್ನುವ ಮಗು ಎಲ್ಲೂ ಹೋಗದೆ ನಮ್ಮ ಮಡಿಲಲ್ಲೇ ಇರುತ್ತದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net