ನಾನು ನನ್ನೊಳಗಿನವನು; ರವಿ ಬೋಪಣ್ಣನಿಂದ ಕೆಲಸ ಕಲಿತರಂತೆ ರವಿಚಂದ್ರನ್

Ravi Chandran
Published on
ಆರು ವರ್ಷಗಳಾಗಿತ್ತು ರವಿಚಂದ್ರನ್ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗಿ. ಈಗ ಅವರು, ‘ರವಿ ಬೋಪಣ್ಣ’ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಈಶ್ವರಿ ಸಂಸ್ಥೆಯ 50ನೇ ವರ್ಷದ ಚಿತ್ರವಾಗಿ ‘ರವಿ ಬೋಪಣ್ಣ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದೊಂದು ಒನ್ ಮ್ಯಾನ್ ಶೋ ಆಗಿದ್ದು, ಅಭಿನಯ ಮತ್ತು ನಿರ್ದೇಶನದ ಜತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ಸಂಕಲನವನ್ನೂ ರವಿಚಂದ್ರನ್ ಅವರೇ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ರವಿಚಂದ್ರನ್, ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

| ಚೇತನ್ ನಾಡಿಗೇರ್ ಬೆಂಗಳೂರು

‘ಇಲ್ಲಿ ಗ್ಲಾಮರ್ ಇದೆ, ಗ್ರಾಮರ್ ಇಲ್ಲ ...’

‘ರವಿ ಬೋಪಣ್ಣ’ ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೀಗೆ ಹೇಳುತ್ತಾರೆ ರವೀಚಂದ್ರನ್. ಇಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಅವರು ಹೇಳುವ ಪ್ರಯತ್ನ ಮಾಡಿದ್ದಾರಂತೆ. ‘ಫ್ಯಾಮಿಲಿ ಎಮೋಷನ್, ವ್ಯವಸ್ಥೆ, ಹಗರಣ, ಆಕ್ಷನ್, ಕಾಮಿಡಿ, ಮ್ಯಾಜಿಕ್, ಭ್ರಮೆ ಎಲ್ಲವೂ ಈ ಚಿತ್ರದಲ್ಲಿದೆ. ನನ್ನೊಳಗೊಬ್ಬ ಇದ್ದಾನೆ. ಅವನು ನನ್ನನ್ನು ನೋಡಿ ನಗುತ್ತಿರುತ್ತಾನೆ. ಯಾವಾಗಲೂ ಪ್ರಶ್ನೆ ಮಾಡುತ್ತಿರುತ್ತಾನೆ. ಅವನಿಗೆ ಉತ್ತರ ಕೊಟ್ಟಿಕೊಂಡೇ ಬದುಕಿದ್ದೇನೆ. ನಾನು ಬಹಳ ವರ್ಷಗಳಿಂದ ನನ್ನ ಜೊತೆಗೆ ಮಾತಾಡುತ್ತಿದ್ದೇನೆ. ಅವನನ್ನು ಈ ಸಿನಿಮಾದಲ್ಲಿ ತಂದಿದ್ದೇನೆ. ಅವನು ಮತ್ತು ಬೋಪಣ್ಣ ಹೇಗೆ ಭೂತ ಮತ್ತು ವರ್ತಮಾನದ ನಡುವೆ ಓಡಾಡುತ್ತಾರೆ ಎನ್ನುವುದೇ ಕಥೆ. ಇಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್​ಗಳಿವೆ. ಅದರಲ್ಲಿ 60 ವರ್ಷದ ಪಾತ್ರವೂ ಒಂದು. ಹಾಗಾಗಿ, 60 ಈಸ್ ಆನ್ ಅನದರ್ ಬಿಗಿನಿಂಗ್ ಅಂತ ಹೇಳಿದ್ದೇನೆ’ ಎನ್ನುತ್ತಾರೆ ರವಿಚಂದ್ರನ್.

ಈ ಚಿತ್ರಕ್ಕೂ ಮುನ್ನ ಕಳೆದು ಹೋಗಿದ್ದೆ: ಈ ಚಿತ್ರ ಮಾಡುವುದಕ್ಕೆ ಮುಂಚೆ ರವಿಚಂದ್ರನ್ ಕಳೆದು ಹೋಗಿದ್ದರಂತೆ. ಹಾಗಂತ ಅವರೇ ಹೇಳಿಕೊಳ್ಳುತ್ತಾರೆ. ‘ನಿಜ ಹೇಳಬೇಕೆಂದರೆ, ನಾನು ಕಳೆದು ಹೋಗಿದ್ದೆ. ಈ ಚಿತ್ರವಾದ ಮೇಲೆ ಕೆಲಸ ಕಲಿತೆ. ಈ ಚಿತ್ರದ ಮೂರು ವರ್ಷನ್ ಎಡಿಟ್ ಮಾಡಿದ್ದೇನೆ. ನನ್ನನ್ನು ಎಲ್ಲರೂ ಹುಚ್ಚ ಎಂದರು. ನಾನು ಈ ಸಿನಿಮಾ ಮುಗಿಸುವುದಿಲ್ಲ ಎಂದರು. ಆದರೆ, ನನ್ನ ಜತೆಗೆ ಒಂದಿಷ್ಟು ಜನ ಗಟ್ಟಿಯಾಗಿ ನಿಂತಿದ್ದರು. ಪ್ರಮುಖವಾಗಿ, ಛಾಯಾಗ್ರಾಹಕ ಜಿ.ಸಿ.ವಿ. ಸೀತಾರಾಂ ನನ್ನ ಕಣ್ಣಾಗಿದ್ದರು. ಪ್ರತಿ ಫ್ರೇಮ್ೂ ಅವರು ಅದ್ಭುತವಾಗಿ ತೋರಿಸಿದ್ದಾರೆ. ಸಂಗೀತದಲ್ಲಿ ಗೌತಮ್ ಮತ್ತು ಗೌರವ್ ಸಹಾಯ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಎಂಟು ಹಾಡುಗಳಿವೆ. ಇನ್ನು, ಮೋಹನ್ ಅವರ ಸಂಭಾಷಣೆ ಇದೆ. ಅವರು ಅರ್ಧಕ್ಕೆ ಸುಸ್ತಾದರು. ಬೇಕು ಎಂದಾಗ ಬರೆದು ಕೊಡುತ್ತಿದ್ದರು. ಕಾವ್ಯಾ ಶೆಟ್ಟಿಗೆ ಈ ಚಿತ್ರದಲ್ಲೊಂದು ಚಾಲೆಂಜಿಂಗ್ ಪಾತ್ರವಿದೆ. ಒಳ್ಳೆಯ ನಟಿ ಅವರು’ ಎನ್ನುತ್ತಾರೆ ರವಿಚಂದ್ರನ್.

ಸುದೀಪ್ ಧ್ವನಿಯಲ್ಲಿ ಕರೆಂಟ್ ಇದೆ: ‘ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನ್ನ ಮತ್ತು ಸುದೀಪ್ ಅವರ ಸಂಬಂಧ ಹೇಳೋಕೆ ಸಾಧ್ಯ ಇಲ್ಲ. ಅವರು ಎಲ್ಲಿಗೋ ಹೋಗುತ್ತಿರುತ್ತಾರೆ. ನಾನು ಫೋನ್ ಮಾಡುತ್ತೇನೆ. ನನ್ನ ಹೊಸ ಚಿತ್ರದಲ್ಲಿ ಒಂದು ಪಾತ್ರ ಇದೆ, ಅದನ್ನು ನೀವೇ ಮಾಡಬೇಕು ಎಂದು ಹೇಳುತ್ತೇನೆ. ಅವರು ಕೇಳೋದು ಒಂದೇ ಮಾತು. ಎಲ್ಲಿಗೆ ಬರಬೇಕು, ಎಷ್ಟು ಹೊತ್ತಿಗೆ ಬರಬೇಕು? ಎಂದು. ಅವರು ನಾನು ಯಾವ ಜನ್ಮದಲ್ಲಿ ಏನಾಗಿದ್ದೆವೋ, ಅಪ್ಪ-ಮಗನೇ ಆಗಿದ್ದೆವೋ ಅಥವಾ ಅವರಿಗೆ ಅಣ್ಣ ಆಗಿದ್ದೆನೋ ಗೊತ್ತಿಲ್ಲ. ಆದರೆ, ಯಾವುದೋ ಜನ್ಮಜನ್ಮದ ಸಂಬಂಧ ನಮ್ಮ ನಡುವೆ ಇದೆ. ಆ ಸಂಬಂಧವೇ ಇದುವರೆಗೂ ಬಂದಿದೆ. ಈ ಸಿನಿಮಾದ ಒಂದು ಹಂತದಲ್ಲಿ ವಿಶಿಷ್ಟವಾದ ಧ್ವನಿ ಬೇಕಿತ್ತು. ಆ ಧ್ವನಿಯಲ್ಲಿ ಕರೆಂಟ್ ಇರಬೇಕು, ಆ ಮಾತನ್ನು ಜನ ಕೇಳಿ ಒಪು್ಪವಂತಿರಬೇಕು. ಕರ್ನಾಟಕದಲ್ಲಿ ಸುದೀಪ್​ಗೆ ಮಾತ್ರ ಅಂಥದ್ದೊಂದು ವಿಶಿಷ್ಟವಾದ ಧ್ವನಿ ಇದೆ. ಇಡೀ ಸಿನಿಮಾದಲ್ಲಿ ನಾನು ಏನೇ ಮಾಡಿದರೂ, ಕೊನೆಯ ಐದು ನಿಮಿಷ ಚಿತ್ರವನ್ನು ಜಸ್ಟಿಫೈ ಮಾಡುವ ಒಂದು ಪಾತ್ರ ಬೇಕಿತ್ತು. ಸುದೀಪ್ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ’ ಎನ್ನುತ್ತಾರೆ ರವಿಚಂದ್ರನ್.

ಇನ್ನೊಂದು ಮಲ್ಲ ತೋರಿಸಿ

‘ರವಿ ಬೋಪಣ್ಣ’ ಚಿತ್ರವನ್ನು ‘ಮಲ್ಲ’ಗೆ ಹೋಲಿಸಿದವರಿದ್ದಾರೆ. ಅದಕ್ಕೆ ಕಾರಣ, ಟ್ರೇಲರ್​ನಲ್ಲಿರುವ ಗ್ಲಾಮರ್ ಅಂಶಗಳು. ‘ಮಲ್ಲ’ ಚಿತ್ರದಲ್ಲೂ ಅದೇ ತರಹದ ಅಂಶಗಳು ಇದ್ದ ಕಾರಣ, ಆ ಚಿತ್ರದ ಜತೆಗೆ ಸಹಜವಾಗಿಯೇ ಹೋಲಿಸಲಾಗುತ್ತದೆ. ಈ ಕುರಿತು ಮಾತನಾಡುವ ರವಿಚಂದ್ರನ್, ‘ಕಳೆದ 20 ವರ್ಷಗಳಲ್ಲಿ ‘ಮಲ್ಲ’ ತರಹದ ಇನ್ನೊಂದು ಸಿನಿಮಾ ತೋರಿಸಿ ನೋಡೋಣ’ ಎನ್ನುತ್ತಾರೆ. ‘ಅದರಲ್ಲಿ ಗ್ಲಾಮರ್ ಅಂಶಗಳು ಇರಬಹುದು. ಆದರೆ, ಅಷ್ಟೇ ಚೆನ್ನಾಗಿ ಫ್ಯಾಮಿಲಿ ಡ್ರಾಮಾ ಇತ್ತು. ಅಂಥದ್ದೊಂದು ಚಿತ್ರ ಈ 20 ವರ್ಷಗಳಲ್ಲಿ ಬಂದಿಲ್ಲ. ಆ ಚಿತ್ರದಲ್ಲಿನ ಗಂಡ-ಹೆಂಡತಿ ಪ್ರೀತಿ ಇರಬಹುದು, ಪಾತ್ರಗಳು, ಕೆಮಿಸ್ಟ್ರಿ ಇರಬಹುದು. ಅದನ್ನು ಎಲ್ಲೂ ನೋಡುವುದಕ್ಕೆ ಸಾಧ್ಯವಿಲ್ಲ. ಮತ್ತೆ ಅದನ್ನು ನೋಡಬೇಕೆಂದರೆ ‘ರವಿ ಬೋಪಣ್ಣ’ ಚಿತ್ರವನ್ನೇ ನೋಡಬೇಕು’ ಎನ್ನುತ್ತಾರೆ ರವಿಚಂದ್ರನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net