

ಬೆಂಗಳೂರು: ಒಂಬತ್ತು ವರ್ಷ ಆಗಿತ್ತು, ರವಿಚಂದ್ರನ್ ಚಿತ್ರವೊಂದರಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡು. ಬಹುಶಃ ಅವರು ಕಡೆಯದಾಗಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡ ಚಿತ್ರ ‘ಮಲ್ಲಿಕಾರ್ಜುನ’ ಇರಬೇಕು. ಈಗ ಅವರು ‘ಕನ್ನಡಿಗ’ ಚಿತ್ರದಲ್ಲಿ ಮತ್ತೊಮ್ಮೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಕನ್ನಡಿಗ’ ಚಿತ್ರದಲ್ಲಿ ಲಿಪಿಕಾರ ಗುಣಭದ್ರನಾಗಿ ರವಿಚಂದ್ರನ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಗಿರಿರಾಜ್ ಈ ಹಿಂದೆ ಹೇಳಿದ್ದರು. ಈಗ ಫ್ಲಾಶ್ಬ್ಯಾಕ್ನಲ್ಲಿ ಬರುವ ಸಮಂತಭದ್ರ ಎಂಬ ಪಾತ್ರದಲ್ಲೂ ಅವರು ನಟಿಸಿದ್ದಾರಂತೆ. ಈ ಎರಡೂ ಪಾತ್ರಗಳು ಮುಖತಃ ಭೇಟಿಯಾಗದಿದ್ದರೂ, ಸಮಂತಭದ್ರ ಎಂಬುವವರು ಗುಣಭದ್ರನ ಪೂರ್ವಜರಂತೆ. ಇವೆರಡೂ ವಿಭಿನ್ನ ಪಾತ್ರಗಳಾಗಿದ್ದು, ಎರಡೂ ಪಾತ್ರಗಳಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.
ಸುಮಲತಾ ಬದಲು ಭವಾನಿ: ಇನ್ನು ಈ ಚಿತ್ರದಲ್ಲಿ ರಾಣಿ ಚೆನ್ನಭೈರಾದೇವಿಯಾಗಿ ಹಿರಿಯ ನಟಿ ಮತ್ತು ಸಂಸದೆ ಸುಮಲತಾ ಅಂಬರೀಷ್ ನಟಿಸುತ್ತಾರೆ ಎಂದು ಮುಹೂರ್ತದ ದಿನವೇ ಗಿರಿರಾಜ್ ಘೋಷಿಸಿದ್ದರು. ಆದರೆ, ಒಂದು ಪ್ರಮುಖ ಬದಲಾವಣೆ ಆಗಿದ್ದು, ಚಿತ್ರದಲ್ಲಿ ಸುಮಲತಾ ಅವರು ಡೇಟ್ಸ್ ಸಮಸ್ಯೆಯಿಂದಾಗಿ ನಟಿಸಿಲ್ಲ. ಅವರ ಬದಲು ರಾಣಿ ಚೆನ್ನಭೈರಾದೇವಿಯಾಗಿ ಭವಾನಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ.
ಒಂದು ಹಾಡು ಮಾತ್ರ ಬಾಕಿ: ಕಳೆದ ತಿಂಗಳು ಪ್ರಾರಂಭವಾಗಿದ್ದ ‘ಕನ್ನಡಿಗ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಗಿರಿರಾಜ್, ‘ಸುಮಾರು 30 ದಿನಗಳ ಕಾಲ ಚಿಕ್ಕಮಗಳೂರು, ಸಾಗರ, ಬೆಂಗಳೂರು ಸೇರಿದಂತೆ ಕೆಲವು ಕಡೆ ಚಿತ್ರೀಕರಣ ಮಾಡಿದ್ದೇವೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನೊಂದು ಹಾಡು ಬಾಕಿ ಇದೆ, ಮಂಗಳವಾರದಿಂದ ಡಬ್ಬಿಂಗ್ ಶುರುವಾಗಲಿದೆ’ ಎಂದು ಮಾಹಿತಿ ಕೊಡುತ್ತಾರೆ.