ಆ.12ಕ್ಕೆ ರವಿ ಬೋಪಣ್ಣ ಬಿಡುಗಡೆ

Ravi Bopanna
Published on

ಬೆಂಗಳೂರು: ರವಿಚಂದ್ರನ್ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗಿ ಆರು ವರ್ಷಗಳೇ ಆಗಿವೆ. ಇದೀಗ ‘ರವಿ ಬೋಪಣ್ಣ’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ರವಿಚಂದ್ರನ್ ತಯಾರಿ ನಡೆಸಿದ್ದು, ಆ. 12ರಂದು ಆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಅಪೂರ್ವ’ ನಂತರ ರವಿಚಂದ್ರನ್, ‘ರಾಜೇಂದ್ರ ಪೊನ್ನಪ್ಪ’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದರು.

ಆ ನಂತರ 2019ರಲ್ಲಿ ‘ರವಿ ಬೋಪಣ್ಣ’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಕಳೆದ ವರ್ಷವೇ ಚಿತ್ರ ಸಂಪೂರ್ಣವಾಗಿ ಸೆನ್ಸಾರ್ ಸಹ ಆಗಿತ್ತಂತೆ. ಆದರೆ, ಚಿತ್ರಕ್ಕೆ ಇನ್ನೇನೋ ಬೇಕು ಅಂತನಿಸಿದ್ದರಿಂದ ಅವರು ಮತ್ತೆ ಇನ್ನೊಂದಿಷ್ಟು ಚಿತ್ರೀಕರಣ ಮಾಡಿದ್ದಾರೆ. ಈಗ ಚಿತ್ರದ ಕೆಲಸಗಳು ಮುಗಿದಿದ್ದು, ಆ. 12ಕ್ಕೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಅವರು ಯೋಚಿಸಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ‘ರವಿ ಬೋಪಣ್ಣ’ ಚಿತ್ರದಲ್ಲಿ ರವಿಚಂದ್ರನ್ ಜತೆಗೆ ಕಾವ್ಯಾ ಶೆಟ್ಟಿ, ಸುದೀಪ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅವರೇ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net