

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಚಿತ್ರ: ವೀರಚಂದ್ರಹಾಸ
ನಿರ್ದೇಶನ: ರವಿ ಬಸ್ರೂರ್
ನಿರ್ಮಾಣ: ಎನ್.ಎಸ್. ರಾಜಕುಮಾರ್
ತಾರಾಗಣ: ಶಿವರಾಜಕುಮಾರ್, ಗರುಡಾ ರಾಮ್, ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್, ಶಿಥಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿಗಾರ್, ನಾಗಶ್ರೀ, ಉದಯ್ ಮತ್ತಿತರರು.
ಯಾವುದೇ ಕ್ಷೇತ್ರದಲ್ಲೂ ಹೊಸ ಪ್ರಯೋಗಗಳು ಯಾವತ್ತೂ ರಿಸ್ಕಿ. ಅದರಲ್ಲೂ ಸಾಮಾನ್ಯವಾಗಿ ಗೆದ್ದೆತ್ತಿನ ಬಾಲ ಹಿಡಿಯುವ ಚಿತ್ರರಂಗದಲ್ಲಂತೂ ಸ್ವಲ್ಪ ಹೆಚ್ಚೇ ರಿಸ್ಕ್. ಎಐ, ವಿಎಫ್ಎಕ್ಸ್, 5ಡಿ, ಆ್ಯನಿಮೇಷನ್, ಅನಿಮೆಗಳ ಈ ಕಾಲದಲ್ಲಿ ಯಕ್ಷಗಾನದಂತಹ ಜಾನಪದ ಕಲಾಪ್ರಕಾರಕ್ಕೆ ಸಿನಿಮಾ ರೂಪ ನೀಡಿ, ಪ್ರೇಕ್ಷಕರನ್ನು ಸೆಳೆಯುವುದು ತಮಾಷೆ ಮಾತಲ್ಲ. ಅಂತಹ ಒಂದು ಕಠಿಣ ಹಾದಿಯಲ್ಲಿ ತಮ್ಮ 12 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ ಸಂಗೀತ ನಿರ್ದೇಶಕ, ನಿರ್ದೇಶಕ ರವಿ ಬಸ್ರೂರ್. ಅದೇ "ವೀರಚಂದ್ರಹಾಸ'.
ಅನಾಥ ಬಾಲಕ ಚಂದ್ರಹಾಸ, ಕುಂತಲ ಸಾಮ್ರಾಜ್ಯದ ಯುವರಾಣಿಯನ್ನು ಮದುವೆಯಾಗಿ, ರಾಜನಾಗುತ್ತಾನೆ ಎಂಬ ಭವಿಷ್ಯ ಕೇಳಿ ಮಂತ್ರಿ ದುಷ್ಟಬುದ್ಧಿ ಕ್ರೋಧಿತನಾಗುತ್ತಾನೆ. ಬಾಲ ಚಂದ್ರಹಾಸನನ್ನು ಕೊಲ್ಲಿಸಲು ಯತ್ನಿಸುತ್ತಾನೆ. ಆದರೆ, ಹೇಗೋ ತಪ್ಪಿಸಿಕೊಳ್ಳುವ ಚಂದ್ರಹಾಸ, 20 ವರ್ಷಗಳ ನಂತರ ಮತ್ತೆ ದುಷ್ಟಬುದ್ಧಿಗೆ ಎದುರಾಗುತ್ತಾನೆ. ಮುಂದೆ ಚಂದ್ರಹಾಸ ಮತ್ತು ದುಷ್ಟಬುದ್ಧಿಯ ನಡುವೆ ನಡೆಯುವ ಹೋರಾಟ ಹೇಗಿರುತ್ತದೆ? ಚಂದ್ರಹಾಸ ರಾಜ ಹೇಗಾಗುತ್ತಾನೆ? ಎಂಬುದರ ಸುತ್ತ ಈ ಯಕ್ಷಗಾನದ ಸಿನಿಮಾಯಾನ ಸಾಗುತ್ತದೆ. ಈ ಪ್ರಸಂಗವನ್ನು ಈ ಹಿಂದೆ ಹಲವು ಬಾರಿ ಯಕ್ಷಗಾನದಲ್ಲಿ ನೋಡಿರಬಹುದು. ಆದರೆ, ಈ ಪ್ರಸಂಗಕ್ಕೆ ರವಿ ಬಸ್ರೂರ್ ಸಿನಿಮಾ ರೂಪ ಹೇಗೆ ನೀಡಿದ್ದಾರೆ? ತಿಳಿಯಲು "ವೀರಚಂದ್ರಹಾಸ' ನೋಡಬೇಕು.
ವೇಷಭೂಷಣಗಳು, ಬಿಜಿಎಂ, ಸಂಗೀತ, ಮೇಕಿಂಗ್ ಹೀಗೆ ತಾಂತ್ರಿಕವಾಗಿ ಈ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹೀಗಾಗಿ ಯಕ್ಷಗಾನ ಪ್ರಿಯರು ಮತ್ತು ಸಿನಿಮಾ ಪ್ರೇಮಿಗಳಿಗೆ ಒಂದು ಉತ್ತಮ ಥಿಯೇಟ್ರಿಕಲ್ ಅನುಭವ ನೀಡುವಲ್ಲಿ ಚಿತ್ರ ಗೆದ್ದಿದೆ. ಆದರೆ, ಅದೇ ಹಳೆ ಮಚ್ಚು, ಲಾಂಗು, ಮಸಾಲಾ, ಬಿಲ್ಡಪ್, ಹೀರೋಯಿಸಂ, ಪಂಚ್ ಡೈಲಾಗ್ ಬೇಕು ಅನ್ನೋರಿಗೆ ಸ್ವಲ್ಪ ತ್ರಾಸ ಅನ್ನಿಸಬಹುದು. ಯಕ್ಷಗಾನ ಸಿನಿಮಾಗಾಗಿ ರವಿ ಬಸ್ರೂರ್ ಕ್ರಿಯೇಟಿವ್ ಫ್ರೀಡಂ ಪಡೆದು, ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ. ಯಕ್ಷಗಾನದಲ್ಲಿ ಪಾತ್ರಗಳ ಕುಣಿತ, ಗಾಂಭೀರ್ಯ, ಭಾಗವತಿಕೆ, ಮಾತು, ಚಂಡೆ&ಮದ್ದಳೆಗಳ ಸದ್ದು ಎಲ್ಲವೂ ಮುಖ್ಯ. ಆದರೆ, ಈ ಸಿನಿಮಾದಲ್ಲಿ ಹೆಚ್ಚು ಕುಣಿತವಿಲ್ಲ. ಬದಲಾಗಿ ಯುದ್ಧ ಮತ್ತು ಕುದುರೆ ಸವಾರಿಯಂತಹ ಸನ್ನಿವೇಶಗಳನ್ನು ನೈಜವಾಗಿ ಚಿತ್ರೀಕರಿಸಿರುವುದು ವಿಶೇಷ. ಇನ್ನು ಯಕ್ಷಗಾನ ಶೈಲಿಯಂತೆಯೇ ಸಂಭಾಷಣೆ ಇದ್ದಿದ್ದರೆ ಸಿನಿಮಾ ಮತ್ತಷ್ಟು ಆಪ್ತವಾಗುತ್ತಿತ್ತು. ಇನ್ನು ಶಿವರಾಜಕುಮಾರ್, ಚಂದನ್ ಶೆಟ್ಟಿ, ಗರುಡಾ ರಾಮ್, ಪುನೀತ್ ರುದ್ರನಾಗ್ ಅವರಂತಹ ಸಿನಿಮಾ ನಟರು ಸಹ ಯಕ್ಷಗಾನ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಾರೆ. ವೀರಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ, ದುಷ್ಟಬುದ್ಧಿ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ಮದನ ಪಾತ್ರದಲ್ಲಿ ಉದಯ್ ಹೆಗ್ಡೆ ಅವರನ್ನು ನೋಡುವುದೇ ಚಂದ.