

ಮುಂಬೈ: ಸುಮಾರು 40 ವರ್ಷಗಳ ಹಿಂದೆ ತೆಗೆದ ಒಂದು ಬ್ಲಾಕ್ ಅಂಡ್ ವೈಟ್ ಫೋಟೋ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. 80ರ ದಶಕದ ಆರಂಭದಲ್ಲಿ ನಡಡೆದ ರಿಷಿ ಕಪೂರ್ ಮತ್ತು ನೀತೂ ಸಿಂಗ್ ಅವರ ಫೋಟೋ ಇದು. ಈ ಫೋಟೋದಲ್ಲಿ ರಿಷಿ ಮತ್ತು ನೀತೂ ಜತೆಗೆ ಒಬ್ಬ ಚಿಕ್ಕ ಹುಡುಗಿ ಇದ್ದು, ಆ ಹುಡುಗಿ ನಂತರದ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಜನಪ್ರಿಯ ನಟಿಯಾಗಿ ಹೊಮ್ಮಿದರು. ಇಷ್ಟಕ್ಕೂ ಆ ನಟಿ ಯಾರು ಗೊತ್ತಾ? ರವೀನಾ ಟಂಡನ್.
ಹೌದು, ಈ ಫೋಟೋದಲ್ಲಿರುವುದು ರವೀನಾ ಟಂಡನ್. ಅಷ್ಟೇ ಅಲ್ಲ, ಈ ಫೋಟೋವನ್ನು ಅವರೇ ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ಮಂಗಳವಾರ ಹಂಚಿಕೊಂಡಿದ್ದಾರೆ.
ಈ ಕುರಿತು ಬರೆದುಕೊಂಡಿರುವ ರವೀನಾ, ಒಂದು ಅಪರೂಪದ ಫೋಟೋ ಸಿಕ್ಕಿದೆ. ಇದನ್ನು ಹುಡುಕಿಕೊಟ್ಟಿದ್ದಿಕ್ಕೆ ಜೂಹಿ ಬಬ್ಬರ್ ಅವರಿಗೆ ಧನ್ಯವಾದಗಳು. ಚಿಂಟು ಅಂಕಲ್ (ರಿಷಿ ಕಪೂರ್) ತಮ್ಮ ಆತ್ಮಚರಿತ್ರೆಯಲ್ಲಿ ಈ ಫೋಟೋ ಬಳಸಿಕೊಳ್ಳಬೇಕೆಂದುಕೊಂಡಿದ್ದರು. ಈ ಫೋಟೋ ಇದ್ದರೆ ಕೊಡು ಎಂದು ಕೇಳಿದ್ದರು. ಆದರೆ, ಆ ಸಂದರ್ಭದಲ್ಲಿ ನನ್ನ ಬಳಿ ಈ ಫೋಟೋ ಇರಲಿಲ್ಲ. ಎಷ್ಟು ಹುಡುಕಿದರೂ ಸಿಗಲಿಲ್ಲ. ಈಗ ಫೋಟೋ ಸಿಕ್ಕಿದೆಯಾದರೂ, ಕೊಡುವುದಕ್ಕೆ ಚಿಂಟು ಅಂಕಲ್ ಬದುಕಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.
ರಿಷಿ ಕಪೂರ್ ಮದುವೆಯಲ್ಲಿ ರವೀನಾ ಟಂಡನ್ ಹೇಗೆ ಎಂಬ ಪ್ರಶ್ನೆ ಬರಬಹುದು. ವಿಷಯವೇನೆಂದರೆ, 70-80ರ ದಶಕದಲ್ಲಿ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ನಿರ್ದೇಶಕರ ಪೈಕಿ ರವಿ ಟಂಡನ್. ಅವರ ಮಗಳೇ ಈ ರವೀನಾ. ರಿಷಿ ಕಪೂರ್ ಜತೆಗೆ ರವಿ ಟಂಡನ್ಗೆ ಒಳ್ಳೆಯ ಬಾಂಧವ್ಯವಿತ್ತು. ಅಷ್ಟೇ ಅಲ್ಲ, ರಿಷಿ ಅಭಿನಯದಲ್ಲಿ ರಾಹೀ ಬದಲ್ ಗಯೆ, ಆನ್ ಔರ್ ಶಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಬರೀ ರಿಷಿ ಅಷ್ಟೇ ಅಲ್ಲ, ನೀತೂ ಜತೆಗೆ ಕೆಲಸ ಮಾಡಿದ್ದ ರವಿ ಟಂಡನ್, ವಖ್ತ್ ಕೀ ದೀವಾರ್ ಎಂಬ ಚಿತ್ರದಲ್ಲಿ ನೀತೂ ಅವರನ್ನು ನಿರ್ದೇಶಿಸಿದ್ದರು.