‘ರತ್ನಾಪುರ’ದಲ್ಲಿ ಭಂಡಾರ ಜಾತ್ರೆ: ಉತ್ತರ ಕರ್ನಾಟಕ ಮಾಳಿಂಗ ದೇವರ ಆಚರಣೆಯ ಹಿನ್ನೆಲೆಯ ಸಿನಿಮಾ

rathanupuar
Published on

ಬೆಂಗಳೂರು: ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಗರಡಿಯಲ್ಲಿ ಪಳಗಿ, ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಹಾಲೇಶ್ ಲೋಕೂರ ‘ರತ್ನಾಪುರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆಯುವ ಜತೆಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಾಲೇಶ್, ‘ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಮಾಳಿಂಗರಾಯ ದೇವರ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ಇದು ಭಂಡಾರ ಜಾತ್ರೆ ಎಂದೇ ಜಗತ್ಪ್ರಸಿದ್ಧಿ. ಹೀಗಾಗಿ, ಇದೇ ಜಾತ್ರೆಯ ಸುತ್ತ ಜತೆಗೆ 1818ರಲ್ಲಿ ನಡೆದ ನೈಜ ಘಟನೆ ಆಧರಿಸಿ ‘ರತ್ನಾಪುರ’ ಚಿತ್ರ ಮಾಡಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆ ಬಹುತೇಕ ರಾತ್ರಿ ಸಮಯದಲ್ಲೇ ಹೆಚ್ಚು ಶೂಟಿಂಗ್ ನಡೆಸಿದ್ದೇವೆ. 1818ರಲ್ಲಿ ಭಂಡಾರ ನಿಧಿಯ ಜಾತ್ರೆ ಹಾಗೂ ಆಂದಿನ ಬರಗಾಲ ಹೀಗೆ ನಾನಾ ಸಾಮಾಜಿಕ ವಿಚಾರಗಳು ಕಥೆಯಲ್ಲಿವೆ. ಕಂದೀಲು ನಮ್ಮ ಚಿತ್ರದ ಪ್ರಮುಖ ಆಕರ್ಷಣೆ. ಸದ್ಯ ಸೆನ್ಸಾರ್ ಹಂತದಲ್ಲಿದ್ದು, ಶೀಘ್ರದಲ್ಲೇ ಸಿನಿಮಾ ರಿಲೀಸ್‌ಗೆ ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು. ಹಾಲೇಶ್ ಜತೆಗೆ ರೇಣುಗೋಪಿ, ಸದ್ದು, ಶೇಷ ರವಿ, ಪ್ರಿಯ ಕೀರ್ತಿ ಕಲಾಬಳಗದಲ್ಲಿದ್ದಾರೆ. ಪ್ರಸನ್ನ ಭೋಜಶೆಟ್ಟರ್ ಸಂಗೀತ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net