ಅಮೆಜಾನ್​ ಪ್ರೖೆಮ್​ನಲ್ಲಿ ಬಿಡುಗಡೆ ಆಗಲಿದೆ ರತ್ನನ್ ಪ್ರಪಂಚ

Rathnan
Published on

ಬೆಂಗಳೂರು: ಬೇರೆ ಭಾಷೆಗಳಲ್ಲಿ ಜನಪ್ರಿಯ ನಟರ ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದರೂ, ಕನ್ನಡದಲ್ಲಿ ಮಾತ್ರ ಇದುವರೆಗೂ ಅಂತಹ ಪ್ರಯೋಗ ಆಗಿರಲಿಲ್ಲ. ಈಗ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರವು ಚಿತ್ರಮಂದಿರಗಳಿಗಿಂತ ಮೊದಲು ನೇರವಾಗಿ ಅಮೆಜಾನ್ ಪ್ರೖೆಮ್​ನಲ್ಲಿ ಅ.22ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕಿರುವಾಗ, ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಔಚಿತ್ಯವೇನು ಎಂಬ ಪ್ರಶ್ನೆ ಸಹಜವೇ. ಒಂದೇ ದಿನದಲ್ಲಿ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ, ಈ ಚಿತ್ರವನ್ನು ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯಲು ಸಹಾಯವಾಗುತ್ತಿದೆ ಎಂಬ ಕಾರಣಕ್ಕೆ ಅಮೆಜಾನ್ ಪ್ರೖೆಮ್​ನಲ್ಲಿ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ರತ್ನನ್ ಪ್ರಪಂಚ’ ಚಿತ್ರವು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ವಣದ ಮೊದಲ ಚಿತ್ರ. ಕೆಆರ್​ಜಿ ಸ್ಟುಡಿಯೋಸ್​ನಲ್ಲಿ ನಿರ್ವಣವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ರೋಹಿತ್ ಪದಕಿ. ‘ದಯವಿಟ್ಟು ಗಮನಿಸಿ’ ನಂತರ ರೋಹಿತ್ ನಿರ್ದೇಶಿಸಿರುವ ಎರಡನೇ ಚಿತ್ರ ಇದು. ರತ್ನಾಕರ ಎಂಬ ಮಧ್ಯವಯಸ್ಕನ ಬದುಕು ಮತ್ತು ಪಯಣದ ಸುತ್ತ ಸಾಗುವ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಈ ಚಿತ್ರದಲ್ಲಿ ಧನಂಜಯ್ ಜತೆಗೆ ರೆಬಾ ಮೋನಿಕಾ ಜಾನ್, ರವಿಶಂಕರ್ ಗೌಡ, ಪ್ರಮೋದ್, ಅನು ಪ್ರಭಾಕರ್, ಶ್ರುತಿ, ಉಮಾಶ್ರೀ ಮುಂತಾದ ಜನಪ್ರಿಯ ನಟ, ನಟಿಯರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net