ರಾಷ್ಟ್ರಕವಿಯ ಜೀವನ ಅನಾವರಣ

govinda pai 5 mar 20
Published on

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಜೀವನವನ್ನಾಧರಿಸಿದ ‘ರಸಋಷಿ ಕುವೆಂಪು’ ಎಂಬ ಚಿತ್ರ ನಿರ್ಮಾಣವಾಗಿದ್ದು, ನಟ ಸಿ.ಆರ್. ಸಿಂಹ ಅವರು ಕುವೆಂಪು ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಗೊತ್ತೇ ಇದೆ. ಈಗ ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನವನ್ನಾಧರಿಸಿ ಚಿತ್ರವೊಂದು ಸದ್ಯದಲ್ಲೇ ಪ್ರಾರಂಭವಾಗಲಿದೆ.

ಅಂದಹಾಗೆ, ಎಂ.ಗೋವಿಂದ ಪೈ ಅವರ ಕುರಿತು ಬಯೋಪಿಕ್ ಮಾಡಲು ಹೊರಟಿರುವುದು ಅವರದೇ ಊರಿನವರು ಎಂಬುದು ಮತ್ತೊಂದು ವಿಶೇಷ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಅಶ್ರಫ್ ಹೊಸಂಗಡಿ ಹಾಗೂ ನಟ ರಾಘವೇಂದ್ರ ಭಟ್ (ರಘು ಭಟ್) ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಅಲ್ಲದೆ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಕೂಡ ಮಂಜೇಶ್ವರದವರೇ. ಮಲಯಾಳಂ ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ತೊಡಗಿಸಿಕೊಂಡು ಅನುಭವ ಇರುವ ಸಂತೋಷ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಇನ್ನು ಈ ಸಿನಿಮಾದ ಚಿತ್ರಕಥೆ ಬರೆದಿರುವುದು ಅದೇ ಜಿಲ್ಲೆಯವರಾದ ಪತ್ರಕರ್ತ ಗಣೇಶ್ ಕಾಸರಗೋಡು.

ಗೋವಿಂದ ಪೈ ಅವರ ಬದುಕಿನ ಘಟನೆಗಳಿಂದ ಪ್ರೇರಿತರಾಗಿರುವ ಅಶ್ರಫ್, ಅದನ್ನು ತೆರೆಮೇಲೆ ತರುವ ಕನಸು ಕಾಣುತ್ತಿದ್ದರು. ಇದೀಗ ಅದಕ್ಕೆ ಕಾಲಕೂಡಿ ಬಂದಿದ್ದು, ನಿರ್ವಣಕ್ಕೆ ತಯಾರಿ ನಡೆಸಲಾಗುತ್ತಿದೆ. ‘ಗೋವಿಂದ ಪೈ ಅವರ ಜೀವನದ ಪ್ರಮುಖ ಘಟನಾವಳಿಗಳನ್ನು ಆಧರಿಸಿ ಚಿತ್ರಕಥೆ ರಚಿಸಲಾಗುತ್ತಿದೆ. ಆ ಬಗ್ಗೆ ಈಗಾಗಲೇ ಒಂದಷ್ಟು ವಿಶೇಷ ಮಾಹಿತಿಗಳನ್ನು ಕಲೆಹಾಕಲಾಗಿದೆ’ ಎಂದಿದ್ದಾರೆ ಗಣೇಶ್ ಕಾಸರಗೋಡು.

ಗೋವಿಂದ ಪೈ ಅವರ ಪಾತ್ರಕ್ಕೆ ಜನಪ್ರಿಯ ನಟರೊಬ್ಬರನ್ನೇ ಆಯ್ಕೆ ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದ್ದು, ಆ ಬಗ್ಗೆ ಒಂದಷ್ಟು ಜನರ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಮಾಹಿತಿ ನೀಡಲಿದೆಯಂತೆ ಚಿತ್ರತಂಡ. ಮಾ. 23ರಂದು ಗೋವಿಂದ ಪೈ ಅವರ 137ನೇ ಜನ್ಮದಿನ. ಅದೇ ದಿನ ಬೆಂಗಳೂರಿನಲ್ಲಿ ಈ ಬಯೋಪಿಕ್​ನ ಮುಹೂರ್ತ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net