

ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಮತ್ತಷ್ಟು ಬಿಜಿಯಾಗಿದ್ದಾರೆ. ಸದ್ಯ ಅವರು ನಟಿಸಿರುವ ‘ಮಿಷನ್ ಮಜ್ನೂ’ ಹಾಗೂ ‘ಗುಡ್ಬೈ’ ಎಂಬ ಎರಡು ಹಿಂದಿ ಚಿತ್ರಗಳು ತೆರೆಗೆ ಬರಲು ರೆಡಿಯಿವೆ. ಮತ್ತೊಂದು ಚಿತ್ರ ‘ಅನಿಮಲ್’ ಘೋಷಣೆಯಾಗಿದ್ದು, ಅದರಲ್ಲಿ ರಣಬೀರ್ ಕಪೂರ್ಗೆ ನಾಯಕಿಯಾಗಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಹೌದು, ಶಶಾಂಕ್ ಕೈತಾನ್ ನಿರ್ದೇಶನದ ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ರಶ್ಮಿಕಾ, ಟೈಗರ್ ಶ್ರಾಫ್ಗೆ ಜೋಡಿಯಾಗಿದ್ದಾರಂತೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಎಲ್ಲವೂ ಅಂದುಕೊಂಡಂತಾದರೆ ಸೆಪ್ಟೆಂಬರ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಭಾರತ ಮತ್ತು ವಿದೇಶಗಳಲ್ಲೂ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ. ಉಳಿದಂತೆ ತಮಿಳಿನಲ್ಲಿ ವಿಜಯ್ ಜತೆ ‘ವರಿಸು’, ತೆಲುಗಿನಲ್ಲಿ ಅಲ್ಲು ಅರ್ಜುನ್ ಜತೆ ‘ಪುಷ್ಪ ದಿ ರೂಲ್’ ಮತ್ತು ‘ಸೀತಾರಾಮಂ’ ಚಿತ್ರಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.
ಮತ್ತೆ ಒಂದಾಗಲಿದ್ದಾರೆ ರಶ್ಮಿಕಾ, ವಿಜಯ್: ಇನ್ನೊಂದೆಡೆ, ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೆ ಒಂದಾಗಿ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಆದರೆ, ಈ ಸಿನಿಮಾಗಳ ಮೂಲಕ ಆರಂಭವಾದ ಇವರಿಬ್ಬರ ಗೆಳೆತನ, ಪ್ರೀತಿ ಪ್ರೇಮಕ್ಕೆ ತಿರುಗಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಅದಕ್ಕೆ ಪೂರಕ ಎಂಬಂತೆ ಇಬ್ಬರೂ ಹಲವೆಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗೆಯೇ ಈ ಹೊಸ ವರ್ಷವನ್ನೂ ಇಬ್ಬರೂ ಜೊತೆಯಾಗಿಯೇ ಗೋವಾದಲ್ಲಿ ಆಚರಿಸಿದ್ದರು. ಹೀಗೆ ಆನ್ಸ್ಕ್ರೀನ್ ಮಾತ್ರವಲ್ಲ ಆಫ್ಸ್ಕ್ರೀನ್ನಲ್ಲೂ ಈ ಜೋಡಿಗೆ ಅಭಿಮಾನಿಗಳು ಹೆಚ್ಚು. ಇಂತಹ ರಶ್ಮಿಕಾ, ವಿಜಯ್ ಜೋಡಿ ಈಗ ಮತ್ತೆ ತೆರೆ ಮೇಲೆ ಒಂದಾಗಲಿದೆಯಂತೆ. ಪೂರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದ ಹಾಡೊಂದರಲ್ಲಿ ವಿಜಯ್ ಜತೆ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್