

'ರಣಬಾಲಿ' ಬಿಡುಗಡೆಗೂ ಮುನ್ನ ತಮಿಳುನಾಡು ಸಿಎಂ ವಿಜಯ್‌ರನ್ನು ಭೇಟಿಯಾದ ರಶ್ಮಿಕಾ-ವಿಜಯ್
ಅವರ ಅಭಿಮಾನಿಯಾಗಿ ಬೆಳೆದು..ಸಕ್ಸಸ್ ಹಾದಿ ನೋಡುವುದು ಸ್ಪೂರ್ತಿದಾಯಕ ಎಂದ ರಶ್ಮಿಕಾ
ಮೊದಲ ಭೇಟಿಯಲ್ಲೇ ಸರ್ ನನ್ನ ನೆಚ್ಚಿನ ವ್ಯಕ್ತಿಯಾಗಿದ್ದಾರೆ ಎಂದು ವಿಜಯ್ ದೇವರಕೊಂಡ ಪೋಸ್ಟ್
Rashmika Mandanna, Vijay Deverakonda Meet Tamil Nadu Chief Minister Vijay: ಡಿಯರ್ ಕಾಮ್ರೇಡ್, ಗೀತಗೋವಿಂದಂ ಸಿನಿಮಾ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ರಣಬಾಲಿ ಪ್ರಚಾರದಲ್ಲಿ ದಂಪತಿ ಬ್ಯುಸಿಯಾಗಿದ್ದಾರೆ. ಸದ್ಯ ಇದರ ಭಾಗವಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಮದುವೆಯಾದ ನಂತರ ಮೊದಲಬಾರಿ ದಂಪತಿ ಸಿಎಂ ವಿಜಯ್ ಅವರನ್ನು ಭೇಟಿಯಾಗಿ, ಅಲ್ಲಿ ಕಳೆದ ಸುಂದರ ಕ್ಷಣದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಸಂಕೃತ್ಯನ್ ನಿರ್ದೇಶನದ ರಣಬಾಲಿ ಸಿನಿಮಾವು ಅ.16ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಮದುವೆಯಾದ ನಂತರ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ನಟಿ ರಶ್ಮಿಕಾ ಮಂಡಣ್ಣ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, 'ಬಹಳ ದಿನಗಳ ಬಳಿಕ ತಮಿಳುನಾಡಿನ ಸಿಎಂ ವಿಜಯ್ ಸರ್ ಅವರನ್ನು ಭೇಟಿ ಮಾಡಿದೆ. ಅವರ ದೊಡ್ಡ ಅಭಿಮಾನಿಯಾಗಿ ಬೆಳೆದು, ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದು, ಇಂದು ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಾಧಿಸಿರುವ ಹಾದಿಯನ್ನು ನೋಡುವುದು ನಂಬಲಸಾಧ್ಯ. ಇದೊಂದು ಸ್ಫೂರ್ತಿದಾಯಕ ಹಾದಿಯಾಗಿದೆ' ಎಂದು ಬರೆದುಕೊಂಡಿದ್ದಾರೆ.
ನಟ ವಿಜಯ್ ದೇವರಕೊಂಡ ಪ್ರೀತಿಯ ವಿಜಯ್ ಸರ್ ಅವರನ್ನು ಇಂದು ಭೇಟಿಯಾದೆ. ಇಡೀ ದಿನ ಕೆಲಸದ ಬಿಜಿಯಲ್ಲಿ ನಮ್ಮನ್ನು ಭೇಟಿ ಮಾಡಲು ಸಮಯ ಮಾಡಿಕೊಂಡರು. ಆತ್ಮೀಯವಾಗಿ ಸ್ವಾಗತಿಸಿದರು. ಅವರೊಂದಿಗೆ ಅತ್ಯಂತ ಸುಂದರವಾದ ಕ್ಷಣಗಳನ್ನು ಕಳೆದೆ. ಜೀವನ, ಕೆಲಸದ ಬಗ್ಗೆ ನಮ್ಮ ಬಳಿ ಮಾತನಾಡಿದರು. ಮೊದಲ ಭೇಟಿಯಲ್ಲೇ ಸರ್ ನನ್ನ ನೆಚ್ಚಿನ ವ್ಯಕ್ತಿಯಾಗಿದ್ದಾರೆ. ಮುಂದಿನ ಭೇಟಿಯವರೆಗೆ, ನನ್ನ ಗೌರವ ಮತ್ತು ಪ್ರೀತಿ ಎಂದಿಗೂ ಇರುತ್ತದೆ ಎಂದು ಹೇಳಿದರು.
ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಡ್ರಾಮಾ ಸಿನಿಮಾ. ಬ್ರಿಟಿಷರ ಆಳ್ವಿಕೆಯಿಂದ ತಮ್ಮ ಹಳ್ಳಿಯನ್ನು ರಕ್ಷಿಸಲು ನಾಯಕ ಮಾಡುವ ಹೋರಾಟದ ಸುತ್ತ ಈ ಸಿನಿಮಾ ಕತೆಯನ್ನು ಹೆಣೆಯಲಾಗಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಿಂಗಣಮಲ ಬೊಬ್ಬಿಲಿ ರಣಬಾಲಿ ಎಂಬ ಕುದುರೆ ಸವಾರ ಮತ್ತು ಹೋರಾಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂಡಣ್ಣ ಅವರ ಪತ್ನಿ ಜಯಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಆರ್ನಾಲ್ಡ್ ವೋಸ್ಲೂ ಬ್ರಿಟಿಷ್ ಕಮಿಷನರ್ ಸರ್ ಥಿಯೋಡರ್ ಹೆಕ್ಟರ್ ಪಾತ್ರಕ್ಕೆ ಜೀವತುಂಬಿದ್ದಾರೆ, (ಏಜೆನ್ಸೀಸ್).