

ಬೆಂಗಳೂರು: ರಶ್ಮಿಕಾ ಮಂದಣ್ಣ ಸದ್ಯ ಸೌತ್ ಇಂಡಸ್ಟ್ರಿಯ ಸೆನ್ಸೆಷನ್. ಕಿರು ಅವಧಿಯಲ್ಲಿಯೇ ಸ್ಟಾರ್ಡಮ್ ಸೃಷ್ಟಿಸಿಕೊಂಡು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ. ಮೂಲ ಕರ್ನಾಟಕದ ಕೊಡಗಿನ ಮೂಲದವರಾದರೂ, ಹೆಚ್ಚು ಖ್ಯಾತಿ ಗಿಟ್ಟಿಸಿಕೊಂಡಿದ್ದು ತೆಲುಗು ನೆಲದಲ್ಲಿ. ಕಿರಿಕ್ ಪಾರ್ಟಿ ಮೂಲಕ ಎಂಟ್ರಿಯಾಗಿ ಈಗ ದಕ್ಷಿಣ ಭಾರತ ಸಿನಿಮಾ ರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ. ಇವತ್ತು (ಭಾನುವಾರ) ಈ ನಟಿಯ ಜನ್ಮದಿನ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ ಅವರ ಅಭಿಮಾನಿಗಳು.
ಹ್ಯಾಪಿ ಬರ್ತಡೇ ರಶ್ಮಿಕಾ ಹ್ಯಾಷ್ಟ್ಯಾಗ್ ಅಡಿಯಲ್ಲಿ ಸರಣಿ ಟ್ವಿಟ್ಗಳು ಸಂದಾಯವಾಗುತ್ತಿವೆ. ಟ್ವಿಟರ್ನಲ್ಲಿ ಕಾಮನ್ ಡಿಪಿ ಸಹ ಬಿಡುಗಡೆಯಾಗಿದ್ದು, ಫ್ಯಾನ್ಸ್ ಗ್ರೂಪ್ಗಳಲ್ಲಿ ರಶ್ಮಿಕಾ ಫೋಟೋ ರಾರಾಜಿಸುತ್ತಿವೆ. ಕನ್ನಡದಿಂದ ‘ಪೈಲ್ವಾನ್’ ಕೃಷ್ಣ, ತೆಲುಗಿನಿಂದ ನಿರ್ದೇಶಕ ವೆಂಕಿ ಕುಡುಮುಲ ಮತ್ತು ತಮಿಳಿನಿಂದ ನಿರ್ಮಾಪಕ ಎಸ್.ಆರ್. ಪ್ರಭು ಈ ಸಿಡಿಪಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಮೂಲಕ ಬಿಡುಗಡೆ ಮಾಡಿ ರಶ್ಮಿಕಾಗೆ ಶುಭ ಕೋರಿದ್ದಾರೆ.