

ಬೆಂಗಳೂರು: ಶುಕ್ರವಾರವಷ್ಟೇ ತೆಲುಗಿನಲ್ಲಿ ‘ಭೀಷ್ಮ’ ಸಿನಿಮಾ ಬಿಡುಗಡೆ ಆಗಿದೆ. ನಿತಿನ್ ನಾಯಕತ್ವದ ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚೆನ್ನಾಗಿಯೇ ಕಮಾಯಿ ಮುಂದುವರಿಸಿದೆ. ಹೀಗಿರುವಾಗಲೇ ರಶ್ಮಿಕಾ ಮುಂದಿನ ಸಿನಿಮಾದ ಬಗ್ಗೆ ಟಾಲಿವುಡ್ನಲ್ಲಿ ಟಾಕ್ ಶುರುವಾಗಿದ್ದು, ಸದ್ದಿಲ್ಲದೆ ಎನ್ಟಿಆರ್ಗೆ ನಾಯಕಿಯಾಗುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ನಿಜವಾಗಿದ್ದೇ ಆದರೆ, ತೆಲುಗಿನ ಬಹುತೇಕ ಸ್ಟಾರ್ ನಟರಿಗೆ ಜೋಡಿಯಾದ ಖ್ಯಾತಿ ಅವರದ್ದಾಗಲಿದೆ.
ಸದ್ಯ ‘ಅಲಾ ವೈಕುಂಟಪುರಂಲೋ’ ಚಿತ್ರದ ಗೆಲುವಿನ ಖುಷಿಯಲ್ಲಿರುವ ಟಾಲಿವುಡ್ನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ‘ಅರವಿಂದ ಸಮೇತ’ ಚಿತ್ರದ ಬಳಿಕ ಎರಡನೇ ಬಾರಿ ಜೂ. ಎನ್ಟಿಆರ್ ಜತೆ ಕೈ ಜೋಡಿಸಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಆ ಚಿತ್ರದ ಶೂಟಿಂಗ್ ಮೇನಲ್ಲಿ ಆರಂಭವಾಗಲಿದ್ದು, ನಾಯಕಿ ವಿಚಾರವಾಗಿ ಸಮಂತಾ, ಪೂಜಾ ಹೆಗಡೆ ಸೇರಿ ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದವು. ಈಗ ರಶ್ಮಿಕಾ ಆಯ್ಕೆ ಅಂತಿಮ ಎಂದೇ ಹೇಳಲಾಗುತ್ತಿದೆ. ಕುತೂಹಲಕಾರಿ ವಿಚಾರ ಏನೆಂದರೆ, ‘ಭೀಷ್ಮ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮೊದಲು ತ್ರಿವಿಕ್ರಮ್ ನಿರ್ದೇಶನದ ಚಿತ್ರಕ್ಕೆ ರಶ್ಮಿಕಾ ಸಹಿ ಮಾಡಿದ್ದರಂತೆ ಎಂಬ ಮಾತೂ ಕೇಳಿಬರುತ್ತಿದೆ.
ಹಾಗಾದರೆ ಈ ವಿಚಾರದ ಬಗ್ಗೆ ರಶ್ಮಿಕಾ ಮೊದಲೇ ಏಕೆ ಮಾತನಾಡಲಿಲ್ಲ? ಹೌದು.. ಈ ಮೊದಲು ಒಪ್ಪಿಕೊಂಡ ಸಿನಿಮಾಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಒಪ್ಪಿಕೊಂಡ ಕೆಲ ಪ್ರಾಜೆಕ್ಟ್ಗಳಿಂದ ಹೊರಬರಬೇಕಾಯಿತು. ಹಾಗಾಗಿ ಎನ್ಟಿಆರ್ ಜತೆಗಿನ ಸಿನಿಮಾ ವಿಚಾರ ಗೌಪ್ಯವಾಗಿಟ್ಟಿದ್ದರು ಎನ್ನಲಾಗುತ್ತಿದೆ. ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಜತೆಗೆ ‘ಪೊಗರು’ ಮತ್ತು ಕಾಲಿವುಡ್ನಲ್ಲಿ ಕಾರ್ತಿ ಜತೆಗೆ ‘ಸುಲ್ತಾನ್’ ಸಿನಿಮಾಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.