ರಾಘಣ್ಣನ ಸಲುವಾಗಿ ‘ಸ್ತಬ್ಧ’ ಒಪ್ಪಿದೆ: ನಟಿ ಹರ್ಷಿಕಾ ಪೂಣಚ್ಚ

Harshika
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಇದೀಗ ಆಸೆ ಈಡೇರಿದ, ಕನಸು ನನಸಾದ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ರಾಘವೇಂದ್ರ ರಾಜಕುಮಾರ್. ಈಗಾಗಲೇ ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಜತೆಗೆ ನಟಿಸಿದ್ದ ಹರ್ಷಿಕಾ, ಇದೀಗ ತುಂಬ ವರ್ಷಗಳ ಬಳಿಕ ರಾಘಣ್ಣ ಜತೆಗೂ ತೆರೆಹಂಚಿಕೊಳ್ಳುವ ಕಾತರದಲ್ಲಿದ್ದಾರೆ. ಅಂಥ ಅವಕಾಶವನ್ನು ‘ಸ್ತಬ್ಧ’ ಚಿತ್ರ ಒದಗಿಸಿದೆ. ‘ಆಗ ತಾನೇ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದೆ. ‘ಪಿಯುಸಿ’ ಎಂಬ ಸಿನಿಮಾ ಸಹ ಮಾಡಿದ್ದೆ. ಒಂದು ದಿನ ರಾಘವೇಂದ್ರ ರಾಜಕುಮಾರ್ ಅವರು ಕರೆ ಮಾಡಿ, ‘ನಮ್ಮ ಸಿನಿಮಾದಲ್ಲಿ ನಟಿಸುತ್ತಿಯಾಮ್ಮ’ ಎಂದಿದ್ದರು.

ಅದು ಅಪ್ಪು ನಟನೆಯ ‘ಜಾಕಿ’ ಸಿನಿಮಾ ಆಗಿತ್ತು. ವಜ್ರೇಶ್ವರಿ ಕಂಬೈನ್ಸ್​ನ ಸಿನಿಮಾದಲ್ಲಿ ನಟಿಸುವುದೇ ಒಂದು ಸಾಧನೆ. ಆ ಅವಕಾಶ ಆಗಲೇ ಸಿಕ್ಕಿತ್ತು. ಅದಕ್ಕೂ ಮೊದಲು ಶಿವಣ್ಣ ಜತೆ ‘ಸುಗ್ರೀವ’ ಮತ್ತು ‘ತಮಸ್ಸು’ ಚಿತ್ರಗಳಲ್ಲಿ ನಟಿಸಿದ್ದೆ. ಆದರೆ, ರಾಘಣ್ಣ ಜತೆಗೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅದೂ ಈಡೇರುತ್ತಿದೆ. ಈ ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರೆ ಹರ್ಷಿಕಾ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿರುವ ಈ ಚಿತ್ರವನ್ನು ಲಾಲಿ ರಾಘವ್ ನಿರ್ದೇಶನ ಮಾಡುತ್ತಿದ್ದಾರೆ. ಸೋಮವಾರವಷ್ಟೇ ಚಿತ್ರದ ಮುಹೂರ್ತವೂ ಮುಗಿದಿದೆ. ಈ ಹಿಂದೆ ‘ರಾಜತಂತ್ರ’ ಸಿನಿಮಾ ಮಾಡಿದ್ದ ಪ್ರತಾಪ್, ‘ಸ್ತಬ್ಧ’ ಚಿತ್ರದಲ್ಲಿ ನಾಯಕನಾಗಿದ್ದಾರೆ. ವಿದ್ಯಾಸಾಗರ್ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ಪಿವಿಆರ್ ಸ್ವಾಮಿ ಛಾಯಾಗ್ರಹಣ, ಆರವ್ ಸಂಗೀತ ನೀಡುತ್ತಿದ್ದಾರೆ. ಪ್ರಶಾಂತ್ ಸಿದ್ಧಿ, ಶ್ರುತಿ, ಬೇಬಿ ಅಂಕಿತಾ ಸೇರಿ ಹಲವರು ಈ ಸಿನಿಮಾದಲ್ಲಿರಲಿದ್ದಾರೆ.

ಪ್ರಚಾರದ ಗಿಮಿಕ್ ಅಲ್ಲ!

ಪುನೀತ್ ಕೊನೆಯ ಚಿತ್ರ ‘ಜೇಮ್್ಸ’ನಲ್ಲಿ ಅಣ್ಣಾವ್ರ ಮಕ್ಕಳು ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಚಾರ. ಆದರೆ, ಇದು ಪಬ್ಲಿಸಿಟಿ ಗಿಮಿಕ್ ಅಲ್ಲ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್. ‘ಪುನೀತ್ ದೊಡ್ಡ ಮಟ್ಟದಲ್ಲಿ ಬೆಳೆದ ನಟ. ಅವನ ಸಿನಿಮಾಕ್ಕೆ ನಮ್ಮ ಪ್ರಚಾರದ ಅವಶ್ಯಕತೆಯೇ ಇಲ್ಲ. ಹೀಗಿರುವಾಗ ನಾನು ಮತ್ತು ಶಿವಣ್ಣ ‘ಜೇಮ್್ಸ’ನಲ್ಲಿ ನಟಿಸುತ್ತಿರುವುದು ಪ್ರಚಾರದ ಸಲುವಾಗಿಯಲ್ಲ. ಚಿತ್ರದಲ್ಲಿ ಆ ಪಾತ್ರಗಳು ಮೊದಲೇ ಇದ್ದವು. ಆದರೆ, ಯಾರು ಮಾಡಬೇಕೆಂಬುದು ನಿರ್ಧಾರವಾಗಿರಲಿಲ್ಲ. ಒಂದೇ ಸಿನಿಮಾದಲ್ಲಿ ಮೂವರು ಇರಲಿ ಎಂಬ ಕಾರಣಕ್ಕೆ ನಟಿಸಲು ಒಪ್ಪಿದೆವು. ಬೇರೆಯವರು ಆ ಪಾತ್ರಗಳಿಗೆ ಆಯ್ಕೆಯಾಗಿದ್ದರೆ, ನಾವು ಒಪು್ಪತ್ತಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net