

ನಟಿ ರವೀನಾ ಟಂಡನ್ ಪುತ್ರಿ ರಾಷಾ ತದಾನಿ ಡೆಬ್ಯೂ ಮಾಡಿರುವ ‘ಆಜಾದ್’ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ರವೀನಾ ಪುತ್ರಿ ಕುರಿತು ಒಂದು ಆಸಕ್ತಿಕರ ವಿಚಾರ ಹೊರಬಿದ್ದಿದೆ. ಅದೇನೆಂದರೆ, ರಾಷಾ ತದಾನಿಗೆ ದೇವರ ಮೇಲೆ ಅಪಾರ ಭಕ್ತಿ ಇದೆಯಂತೆ. ಅವರಿಗೆ ಶಿವ ಇಷ್ಟವಾದ ದೇವರಂತೆ. ಈ ಹಿನ್ನೆಲೆಯಲ್ಲಿ ದೇಶದ 12 ಪ್ರಮುಖ ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡುವ ಸಂಕಲ್ಪ ಹೊಂದಿರುವ ರಾಷಾ, ಈಗಾಗಲೇ 11 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ, ಶಿವನ ದರ್ಶನ ಪಡೆದಿದ್ದಾರಂತೆ. ಈ ಬಗ್ಗೆ ‘ನಾನು ಈಗಾಗಲೇ 11 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿದ್ದೇನೆ. ಕೇದಾರನಾಥ, ಸೋಮನಾಥ, ರಾಮೇಶ್ವರಂ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಕೊನೆಯದಾಗಿ ಕಾಶಿ ವಿಶ್ವನಾಥ ಸನ್ನಿಧಿಗೆ ತೆರಳಿದ್ದೆ. 12ರ ಜ್ಯೋತಿರ್ಲಿಂಗಳಲ್ಲಿ ಗುಜರಾತ್‌ನಲ್ಲಿರುವ ದ್ವಾರಕದ ನಾಗೇಶ್ವರ ಕ್ಷೇತ್ರ ಮಾತ್ರ ಉಳಿದಿದ್ದು, ಅದನ್ನು ಈ ವರ್ಷ ಪೂರ್ಣಗೊಳಿಸಲಿದ್ದೇನೆ. ಈ ಮೂಲಕ ನನ್ನ ಸಂಕಲ್ಪ ಈಡೇರಲಿದೆ. ಶಿವನ ಮೇಲೆ ನನಗೆ ವಿಶೇಷ ಒಲವಿದೆ. ಪ್ರತಿ ಕ್ಷಣವೂ ನನ್ನೊಂದಿಗೆ ಶಿವ ಇದ್ದಾನೆ ಎಂದು ಭಾವಿಸುವೆ’ ಎಂದು ಹೇಳಿಕೊಂಡಿದ್ದಾರೆ. 11 ಜ್ಯೋತಿರ್ಲಿಂಗಗಳ 11 ಕಪ್ಪು ದಾರಗಳನ್ನು ರಾಷಾ ಎಡಗೈಗೆ ಕಟ್ಟಿಕೊಂಡಿದ್ದಾರೆ. -ಏಜೆನ್ಸೀಸ್