

ಮುಂಬೈ: ಒಂದು ಕಡೆ ದಕ್ಷಿಣ ಭಾರತದ ದೊಡ್ಡದೊಡ್ಡ ಚಿತ್ರಗಳ ಬಿಡುಗಡೆ ದಿನಾಂಕಗಳು ಘೋಷಣೆಯಾಗುತ್ತಿದ್ದರೆ, ಇನ್ನೊಂದು ಕಡೆ ಸಲ್ಮಾನ್ ಖಾನ್ ಅಭಿನಯದ 'ರಾಧೇ' ಬಿಟ್ಟರೆ ಯಾವ ಬಾಲಿವುಡ್ ಚಿತ್ರದ ಬಿಡುಗಡೆ ದಿನಾಂಕಯೂ ಕಳೆದ ವಾರದವರೆಗೂ ಆಗಿರಲಿಲ್ಲ.
ಇದನ್ನೂ ಓದಿ: ದಾವಣಗೆರೆಯಲ್ಲಿ ಪೊಗರು ಹಾಡುಗಳ ಹಬ್ಬ
ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರದ ಬಿಡುಗಡೆಯ ದಿನಾಂಕ ಕಳೆದ ವಾರವಷ್ಟೇ ಘೋಷಣೆಯಾಗಿತ್ತು ಮತ್ತು ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಏಪ್ರಿಲ್ ಎರಡರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿರುವ '83' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವುದರಲ್ಲಿದೆ.
ಚಿತ್ರವನ್ನು ನಿರ್ಮಿಸಿರುವ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯು ಇನ್ನೂ ಅಧಿಕೃತವಾಗಿ ಚಿತ್ರದ ಬಿಡುಗಡೆಯನ್ನು ಘೋಷಿಸದಿದ್ದರೂ, ಜೂನ್ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಭಾರತ ವಿಶ್ವಕಪ್ ಗೆದ್ದ ದಿನದಂದೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು, '83' ಚಿತ್ರದ ಬಿಡುಗಡೆಯು ಜೂನ್ಗೆ ಹೋಗಿದೆ. ಏಪ್ರಿಲ್ನಲ್ಲಿ 'ಸೂರ್ಯವಂಶಿ' ಚಿತ್ರ ಬಿಡುಗಡೆಯಾಗಲಿದೆ. ಮೇನಲ್ಲಿ 'ರಾಧೇ' ಮತ್ತು 'ಸತ್ಯಮೇವ ಜಯತೇ 2' ಚಿತ್ರಗಳು ಬಿಡಗುಡೆಯಾಗಲಿವೆ. ಹಾಗಾಗಿ ಜೂನ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಬಗ್ಗೆ ರಿಲಯನ್ಸ್ ಎಂಟರ್ಟೈನ್ಮೆಂಟ್ ನಿರ್ಧರಿಸಿದೆ. ಇನ್ನು 1983ರ ಜೂನ್ 25ರಂದು ಭಾರತವು ವಿಶ್ವಕಪ್ ಗೆದ್ದಿದ್ದರಿಂದ, ಅದೇ ದಿನ ಚಿತ್ರ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆ ಸಂಸ್ಥೆಗಿದೆ. ಜೂನ್ 25 ಶುಕ್ರವಾರವಾದ್ದರಿಂದ, ಅದೇ ದಿನ ಚಿತ್ರ ಬಿಡುಗಡೆಯಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ.
ಇದನ್ನೂ ಓದಿ: ಸಲಾರ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಡಾನ್ಸ್?
'83' ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮಿಕ್ಕಂತೆ ದೀಪಿಕಾ ಪಡುಕೋಣೆ, ತಾಹಿರ್ ರಾಜ್ ಭಾಸಿನ್, ಸಾಖಿಬ್ ಸಲೀಮ್, ಸಾಹಿಲ್ ಕಟ್ಟರ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದಾರೆ.