ರಂಜಿನಿ ನಿರ್ದೇಶನ ಮೊದಲ ಚಿತ್ರದ ಟೈಟಲ್ ಘೋಷಣೆ: ‘ಡಿ ಡಿ ಢಿಕ್ಕಿ’ ಎಂದು ಶೀರ್ಷಿಕೆ

ranjini 1
Published on

ಬೆಂಗಳೂರು: ಕನ್ನಡದಲ್ಲಿ ನಿರ್ದೇಶಕಿಯರ ಪರಂಪರೆಯೇ ಇದೆ. ಪ್ರೇಮಾ ಕಾರಂತ್, ವಿಜಯಲಕ್ಷ್ಮೀ ಸಿಂಗ್, ಕವಿತಾ ಲಂಕೇಶ್, ಸುಮನಾ ಕಿತ್ತೂರು ಹೀಗೆ ಪಟ್ಟಿ ಸಾಗುತ್ತದೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ಎಂದರೆ ರಂಜಿನಿ ರಾಘವನ್. ಕನ್ನಡದ ‘ಪುಟ್ಟಗೌರಿ ಮಗಳು’, ‘ಕನ್ನಡತಿ’ ಧಾರಾವಾಹಿ ಹಾಗೂ ‘ರಾಜಹಂಸ’, ‘ಕಾಂಗರೂ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ರಂಜಿನಿ ಇದೀಗ, ಹೊಸ ಸಾಹಸಕ್ಕೆ ಕೈ ಹಾಕಿದ್ದು, ಮೊದಲ ಬಾರಿಗೆ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದು, ‘ಡಿ ಡಿ ಢಿಕ್ಕಿ’ ಎಂದು ಶೀರ್ಷಿಕೆ ಇಡಲಾಗಿದೆ. ನಟ ‘ನೆನಪಿರಲಿ’ ಪ್ರೇಮ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಟ ಗಣೇಶ್ ಪುತ್ರ ಮಾಸ್ಟರ್ ವಿಹಾನ್ ತಾರಾಗಣದಲ್ಲಿದ್ದಾರೆ. ‘ಮ್ಯೂಸಿಕ್ ಮಾಂತ್ರಿಕ’ ಇಳಯರಾಜ ‘ಡಿ ಡಿ ಢಿಕ್ಕಿ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ರಂಜಿನಿ ರಾಘವನ್, ‘ಕಾಮಿಡಿ ಮೂಲಕ ಭಾವನಾತ್ಮಕ ಸನ್ನಿವೇಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇಳಯರಾಜ ಅವರು ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡಿರುವುದರಿಂದ ಇದೊಂದು ಸಂಗೀತ ಪ್ರಧಾನ ಚಿತ್ರವೂ ಆಗಲಿದೆ. ಈಗಾಗಲೇ ಅರ್ಧಕ್ಕೂ ಹೆಚ್ಚು ಭಾಗ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ’ ಎಂದು ಮಾಹಿತಿ ನೀಡಿದರು. ಸುಧಾಕರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ಅದ್ಭುತ ಕಥೆ: ನಟ ಪ್ರೇಮ್ ಸಿನಿಮಾ ಕುರಿತು, ‘ಮೊದಲಿಗೆ ನಾನು ಒಪ್ಪಿರಲಿಲ್ಲ. ತರುಣ್ ಸುಧೀರ್ ಕಥೆ ಹೇಳಿದಾಗ ಮನ ಮುಟ್ಟಿತು. ಚಿತ್ರೀಕರಣ ಮುಗಿಸಿ ಮನೆಗೆ ಹೋದ ನಂತರ ಸನ್ನಿವೇಶಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿರುವುದು ಇದೆ. ವಿವಿಧ ಕಾರಣಗಳಿಂದ ತಮ್ಮ ಊರನ್ನು ಬಿಟ್ಟು ಬೆಂಗಳೂರಿಗೆ ಬಂದ ಎಷ್ಟೋ ಜನರನ್ನು ನಾವು ಊರು ಬಿಟ್ಟು ಬಂದಿದ್ದು ತಪ್ಪಾಯಿತಾ? ಎಂಬ ಪ್ರಶ್ನೆ ಈ ಚಿತ್ರ ನೋಡಿದ ಮೇಲೆ ಮೂಡುವುದಂತೂ ಖಂಡಿತ’ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net