

ಬಾಲಿವುಡ್‌ನ ಜೋಡಿಗಳ ಪೈಕಿ, ಅತ್ಯಂತ ಅಪರೂಪದ ಜೋಡಿ ಎಂದರೆ ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ ಅವರದ್ದು. ಒಂದು ಕಡೆ ಬೇರೆ ಜೋಡಿಗಳೆಲ್ಲಾ ಊರೆಲ್ಲಾ ಒಂದಲ್ಲ ಒಂದು ಸುದ್ದಿ ಮಾಡುತ್ತಿದ್ದರೆ, ಆದಿತ್ಯ ಮತ್ತು ರಾಣಿ ಮುಖರ್ಜಿ ಮಾತ್ರ ಮೀಡಿಯಾದವರೆಂದರೆ ಮಾರು ದೂರ ಹೋಗುತ್ತಾರೆ. ಅದರಲ್ಲೂ ಆದಿತ್ಯ ಚೋಪ್ರಾ ಆರಂಭದಿಂದಲೂ ಕಾಣಿಸಿಕೊಂಡಿದ್ದು ಕಡಿಮೆಯೇ. ತಮ್ಮ ಖಾಸಗಿ ವಿಚಾರಗಳನ್ನು ಎಲ್ಲೂ ಹಂಚಿಕೊಳ್ಳದ ಆದಿತ್ಯ, ಇದುವರೆಗೂ ಸಂದರ್ಶನ ಕೊಟ್ಟಿದ್ದು ಬಹಳ ಕಡಿಮೆಯೇ. ಅದೇ ಕಾರಣಕ್ಕೆ ಆದಿತ್ಯ ಅವರನ್ನು ಮದುವೆಯಾಗಿ ಹೇಳಿಕೊಂಡಿದ್ದಾರೆ ರಾಣಿ ಮುಖರ್ಜಿ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಗಂಡನ ಬಗ್ಗೆ ಮಾತಾಡಿರುವ ರಾಣಿ ಮುಖರ್ಜಿ, ‘ನನ್ನ ಗಂಡ, ಕರಣ್ ಜೋಹಾರ್ ತರಹ ಅಲ್ಲ. ಕರಣ್ ಎಷ್ಟು ಸೋಷಿಯಲ್ ಎಂದರೆ, ಅವರು ಎಲ್ಲೆಲ್ಲೂ ಇರುತ್ತಾರೆ. ಪ್ರತಿದಿನ ಅವರು ಯಾವ್ಯಾವುದೋ ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ನನ್ನ ಗಂಡ ಹಾಗಲ್ಲ. ಅವರು ಹೆಚ್ಚಾಗಿ ಎಲ್ಲೂ ಹೋಗುವುದಿಲ್ಲ. ತಾವಾಯಿತು, ತಮ್ಮ ಪಾಡಾಯಿತು ಅಂತ ಇರುತ್ತಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರು ಖಾಸಗಿ ಜೀವನಕ್ಕೆ ಹೆಚ್ಚು ಆದತ್ಯ ಕೊಡುತ್ತಾರೆ. ಕೆಲಸದ ನಂತರ ಪಾರ್ಟಿಗಳಿಗೆ ಹೋಗುವುದಿಲ್ಲ. ಸೀದಾ ಮನೆಗೆ ಬರುತ್ತಾರೆ’ ಎಂದು ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ.
‘ನಾನು ಚಿತ್ರರಂಗದಲ್ಲಿ ಬಹಳ ಗೌರವ ಕೊಡುವ ವ್ಯಕ್ತಿ ಎಂದರೆ ಅದು ಆದಿ. ಪ್ರತಿಯೊಬ್ಬರ ಒಳ-ಹೊರಗು ಗೊತ್ತಿರುವುದರಿಂದ, ಎಲ್ಲರ ಬಗ್ಗೆ ಗೌರವ ಮೂಡುವುದು ಕಡಿಮೆ. ಆದರೆ, ಆದಿ ಹಾಗಲ್ಲ. ಅವರ ಬಗ್ಗೆ ನನಗೆ ಮೊದಲಿನಿಂದಲೂ ಬಹಳ ಗೌರವ’ ಎಂದು ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ.