

ಬೆಂಗಳೂರು: ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್ನ ‘ರಂಗನಾಯಕ’ ಸಿನಿಮಾ ಟೀಸರ್ ರಿಲೀಸ್ ಆಗಿ ಆಮೇಲೆ ಸುದ್ದಿಯಿಲ್ಲದಂತಾಗಿತ್ತು. ಈ ಮಧ್ಯೆ ಚಿತ್ರ ನಿಂತು ಹೋಗಿದೆ, ನಿರ್ದೇಶಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಗುಸುಗುಸು ಕೇಳಿ ಬಂದಿತ್ತು. ಆದರೆ, ಅವೆಲ್ಲಾ ಸುಳ್ಳಷ್ಟೇ ಅಲ್ಲ, ಏಪ್ರಿಲ್ 2ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕ ವಿಖ್ಯಾತ್ ತಿಳಿಸಿದ್ದಾರೆ.
‘ರಂಗನಾಯಕ’ ಚಿತ್ರದ ಕುರಿತು ಮಾಹಿತಿ ನೀಡುವ ವಿಖ್ಯಾತ್, ‘ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ಜತೆಯಾಟದಲ್ಲಿ ಈ ಹಿಂದೆ ಬಂದಿದ್ದ ಎರಡು ಚಿತ್ರಗಳಿಗೂ, ‘ರಂಗನಾಯಕ’ ಚಿತ್ರಕ್ಕೂ ಬಹಳ ವ್ಯತ್ಯಾಸ ಇದೆ. ಈ ಚಿತ್ರದ ಕಥೆ 90ರ ದಶಕದಲ್ಲಿ ನಡೆಯಲಿದ್ದು, ಬಹುತೇಕ ಚಿತ್ರೀಕರಣ ಸೆಟ್ನಲ್ಲೇ ನಡೆಯಲಿದೆ.
ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾಗಿದ್ದ ‘ಪುಷ್ಪಕ ವಿಮಾನ’ಚಿತ್ರಕ್ಕೆ ಕುಂಬಳಗೋಡಿನ ಬಳಿ ಸೆಟ್ ಹಾಕಿದ್ದೆವು. ಅದೊಂದು ರೀತಿಯಲ್ಲಿ ನಮಗೆ ಲಕ್ಕಿ. ಈಗಲೂ ಅಲ್ಲಿಯೇ ಸೆಟ್ ಹಾಕಲು ಪ್ಲಾನ್ ಮಾಡಿದ್ದೇವೆ. ಈಗಾಗಲೇ ಕಥೆ ಫೈನಲ್ ಆಗಿದ್ದು ನಿರ್ದೇಶಕ ಗುರುಪ್ರಸಾದ್ ಅವರು ಹೊಗೇನಕಲ್ ಫಾಲ್ಸ್ ಬಳಿಯ ತೋಟವೊಂದರಲ್ಲಿ ಚಿತ್ರಕಥೆ, ಸಂಭಾಷಣೆ ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ’ ಎನ್ನುತ್ತಾರೆ.
ಈಗ ಬಿಡುಗಡೆಯಾಗಿರುವ ಟೀಸರ್ ಬರೀ ಅವರಿಬ್ಬರೂ ಒಂದಾಗುತ್ತಿದ್ದಾರೆ ಎಂದು ತಿಳಿಸಲು ಎನ್ನುವ ವಿಖ್ಯಾತ್, ‘ಸಿನಿಮಾ ಆರಂಭವಾಗಿ ಒಂದು ವಾರದಲ್ಲಿ ಮತ್ತೊಂದು ಟೀಸರ್ ಬಿಡುಗಡೆ ಮಾಡುತ್ತೇವೆ. 150ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿರಲಿದ್ದು, ಬಜೆಟ್ ಕೂಡಾ ಹೆಚ್ಚಾಗಲಿದೆ. ನಾವು ‘ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕಾರಣ ‘ರಂಗನಾಯಕ’ ಬಗ್ಗೆ ಏನೂ ಅಪ್ಡೇಟ್ ನೀಡಿರಲಿಲ್ಲ’ ಎನ್ನುತ್ತಾರೆ.
‘ರಂಗನಾಯಕ’ ನಿಂತು ಹೋಗಿದೆ, ಗುರುಪ್ರಸಾದ್ ಕೈಗೆ ಸಿಗುತ್ತಿಲ್ಲ ಎಂಬ ಮಾತುಗಳೆಲ್ಲ್ಲಾ ಗಾಳಿ ಸುದ್ದಿ. ಏಪ್ರಿಲ್ 2ರಿಂದ ಸಿನಿಮಾ ಆರಂಭವಾಗುತ್ತದೆ. ನಿರ್ದೇಶಕರು ಮತ್ತು ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. | ವಿಖ್ಯಾತ್ ನಿರ್ಮಾಪಕ