ಸಿನಿಮಾ ತಡಮಾಡಿದ್ರೆ ರಣಬೀರ್​​ ಏನ್ಮಾಡ್ತಾರಂತೆ ಗೊತ್ತಾ?

Ranbir Kapoor - Final
Published on

ಮುಂಬೈ: ರಣಬೀರ್​ ಕಪೂರ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡು ವರ್ಷಗಳೇ ಆಗಿವೆ. ಸಂಜಯ್​ ದತ್​ ಅವರ ಬಯೋಪಿಕ್​ ಆದ 'ಸಂಜು' ಚಿತ್ರದ ನಂತರ, ರಣಬೀರ್​ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗಿಲ್ಲ. 'ಬ್ರಹ್ಮಾಸ್ತ್ರ', 'ಶಂಶೇರಾ' ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದರೂ, ಲಾಕ್​ಡೌನ್​ನಿಂದ ಆ ಚಿತ್ರಗಳು ಈ ವರ್ಷ ಬಿಡುಗಡೆಯಾಗಲೇ ಇಲ್ಲ.

ಆ ಎರಡೂ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಅದರ ಜತೆಗೆ ಇನ್ನಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಸಮಯ ಹಾಳು ಮಾಡಿರುವ ರಣಬೀರ್​, ಇನ್ನು ಮುಂದೆ ಸಮಯ ವ್ಯರ್ಥ ಮಾಡಬಾರದು ಎಂದು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಮೇಲೆ ಸಿನಿಮಾ ಮಾಡುವುದಕ್ಕೆ ಅವರು ತಯಾರಿ ನಡೆಸಿದ್ದಾರೆ. ಈ ವಿಷಯದಲ್ಲಿ ತಮ್ಮ ಕಡೆಯಿಂದ ಯಾವುದೇ ಲೋಪವಾಗದಂತೆ ಅವರು ನೋಡಿಕೊಂಡಿದ್ದು, ಚಿತ್ರತಂಡಗಳಿಂದಲೂ ಯಾವುದೇ ಸಮಸ್ಯೆ ಆಗಬಾರದು ಎಂದು ಸೂಚಿಸಿದ್ದಾರಂತೆ.

ಈ ಹಿನ್ನೆಲೆಯಲ್ಲಿ ತಮ್ಮ ಅಗ್ರಿಮೆಂಟ್​ನಲ್ಲಿ ಹೊಸ ಷರತ್ತೊಂದನ್ನು ಸೇರಿಸಿದ್ದಾರಂತೆ. ಅದರ ಪ್ರಕಾರ, ಚಿತ್ರತಂಡದವರು ಯಾವುದೇ ಕಾರಣಕ್ಕೂ ಚಿತ್ರವನ್ನು ತಡ ಮಾಡುವಂತಿಲ್ಲ. ಹೇಳಿದ ಸಮಯಕ್ಕೆ ಸರಿಯಾಗಿ ಚಿತ್ರವನ್ನು ಮುಗಿಸಿ ಕೊಡಬೇಕು. ಒಂದು ಪಕ್ಷ ಹೇಳಿದ ಸಮಯಕ್ಕೆ ಚಿತ್ರವನ್ನು ಮುಗಿಸದಿದ್ದರೆ, ಪ್ರತಿ ದಿನ ಇಂತಿಷ್ಟು ಎಂದು ಸಂಭಾವನೆ ಕೊಡಬೇಕು ಎಂಬ ಷರತ್ತನ್ನು ರಣಬೀರ್ ಸೇರಿಸಿದ್ದಾರೆ ಎಂದು ಹೇಳಲಾಗಿದೆ.

ಅಂದಹಾಗೆ, ಜನವರಿ ಆರರಿಂದ ರಣಬೀರ್​ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಶ್ರದ್ಧಾ ಕಪೂರ್​ ಸಹ ನಟಿಸಲಿದ್ದಾರೆ. ಇದಾದ ನಂತರ, ಅವರು ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​' ಮತ್ತು ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ 'ಬೈಜು ಬಾವ್ರಾ' ಚಿತ್ರಗಳಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net