

ಬೆಂಗಳೂರು: ಕೇಂದ್ರ ಸರ್ಕಾರವು ಅನ್ಲಾಕ್-5 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 15ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ಪ್ರಾರಂಭಿಸಬಹುದು ಎಂದು ಹೇಳಿದೆ. ಚಿತ್ರಪ್ರದರ್ಶನ ಆರಂಭಿಸಬಹುದು ಎಂದು ಸರ್ಕಾರವೇ ಹೇಳಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಕಳೆದ ಏಳು ತಿಂಗಳಿಂದ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ನೋಡದಿರುವವರು, ಇದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರರಂಗದ ವಲಯದಲ್ಲಿ, ಯಾವ ಚಿತ್ರ ಬಿಡುಗಡೆಯಾದರೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಾರೆ ಎಂಬ ಲೆಕ್ಕಾಚಾರ ನಡೆದಿದೆ. ಆದರೆ, ಇಂತಹ ಸಂದರ್ಭಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಜನ ನೋಡುತ್ತಾರಾ ಎಂಬ ಭಯ ನಿರ್ಮಾಪಕರನ್ನು ಕಾಡುತ್ತಿದೆ. ಅದೇ ಕಾರಣಕ್ಕೆ, ಹಲವು ನಿರ್ಮಾಪಕರು ಒಂದಿಷ್ಟು ಚಿತ್ರಗಳು ಬಿಡುಗಡೆಯಾಗಲಿ ಎಮದು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಹೀಗಿರುವಾಗಲೇ, ನಿರ್ಮಾಪಕ ಕನಕಪುರ ಶ್ರೀನಿವಾಸ್ ತಮ್ಮ 'ರಣಂ' ಚಿತ್ರವನ್ನು ದಸರಾ ಹಬ್ಬದ ಕೊಡುಗೆಯಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಮಾರ್ಚ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಮೂರು ತಿಂಗಳ ಅಂತರದಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾದವು.
ಹಾಗಾಗಿ ಗ್ಯಾಪ್ ಇರಲಿ ಎಂಬ ಕಾರಣಕ್ಕೆ, ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದ್ದರು ಶ್ರೀನಿವಾಸ್. ಆದರೆ, ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಚಿತ್ರ ಬಿಡುಗಡೆಗೆ ಸಜ್ಜಾಗಿದ್ದರೂ ಬಿಡುಗಡೆಯಾಗುವಂತಿರಲಿಲ್ಲ. ಇದೀಗ ಚಿತ್ರಪ್ರದರ್ಶನ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ, ಚಿತ್ರವನ್ನು ಅಕ್ಟೋಬರ್ 23ಕ್ಕೆ ನರ್ತಕಿ ಹಾಗೂ ಇನ್ನಿತರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಶ್ರೀನಿವಾಸ್ ಮುಂದಾಗುತ್ತಿದ್ದಾರೆ.
'ರಣಂ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಆ ದಿನಗಳು' ಖ್ಯಾತಿಯ ಚೇತನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಿಕ್ಕಂತೆ ವರಲಕ್ಷ್ಮೀ ಶರತ್ಕುಮಾರ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಜನಪ್ರಿಯ ನಿರ್ದೇಶಕ ವಿ. ಸಮುದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.