ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ

Review
Published on

ಚಿತ್ರ: ರಣಂ, ನಿರ್ದೇಶನ: ಸಮುದ್ರ, ನಿರ್ಮಾಣ: ಕನಕಪುರ ಶ್ರೀನಿವಾಸ್, ತಾರಾಗಣ: ಚಿರಂಜೀವಿ ಸರ್ಜಾ, ಚೇತನ್, ವರಲಕ್ಷ್ಮೀ ಶರತ್ ಕುಮಾರ್, ಸಾಧು ಕೋಕಿಲ ಮುಂತಾದವರು.

| ಚೇತನ್ ನಾಡಿಗೇರ್ ಬೆಂಗಳೂರು

ಯಾರದೋ ಅಕೌಂಟ್​ನಲ್ಲಿರುವ 250 ಕೋಟಿ ರೂ.ಗಳನ್ನು ಬೇರೆ ಇನ್ನ್ಯಾರದೋ ಅಕೌಂಟ್​ಗೆ ವರ್ಗಾಯಿಸಿ ಸಿಕ್ಕಿಬಿದ್ದಿರುತ್ತಾನೆ ಆತ. ಇದೆಲ್ಲ ಯಾಕೆ ಮತ್ತು ಯಾರಿಗಾಗಿ ಮಾಡಿದೆ? ಹಾಗಂತ ಪೊಲೀಸರು ಕೂರಿಸಿಕೊಂಡು ಪ್ರಶ್ನಿಸುತ್ತಾರೆ. ಅದಕ್ಕೆ ಅವನು ನೀಡುವ ಉತ್ತರ, ಸ್ನೇಹಿತರು... ಸ್ನೇಹಕ್ಕಾಗಿ ಅವನು ಅಷ್ಟೆಲ್ಲ ಮಾಡಿದ ಎನ್ನುವುದಕ್ಕಿಂತ, ಆ ಸ್ನೇಹಿತರ ಕಾಳಜಿಗಾಗಿ ಅವನು ಅಷ್ಟೆಲ್ಲ ಮಾಡಿರುತ್ತಾನೆ. ಇಷ್ಟಕ್ಕೂ ಅವರ ಕಾಳಜಿ ಏನು ಎಂದರೆ, ರೈತರಿಗೆ ನ್ಯಾಯ ಕೊಡಿಸುವುದು. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರಿಗೆ ಪರಿಹಾರ ಕೊಡುವುದು ಪರಿಹಾರವಲ್ಲ, ಅವರು ಬದುಕಿದ್ದಾಗಲೇ ಅವರ ಬದುಕನ್ನು ಸದೃಢಗೊಳಿಸುವುದು ನಿಜವಾದ ಪರಿಹಾರ ಎಂಬುದು ಆ ವಿದ್ಯಾರ್ಥಿಗಳ ನಂಬಿಕೆ. ಅದಕ್ಕಾಗಿ ಮೊದಲಿಗೆ ರೈತರ ಜಮೀನಿಗೆ ನೀರು ಹರಿಸುವುದಕ್ಕೆ ಪಣ ತೊಡುತ್ತಾರೆ. ರಾಜಕೀಯ ಅವ್ಯವಸ್ಥೆಯಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶ್ರೀರಾಮ್ ಸಾಗರ್ ಎಂಬ ನೀರಾವರಿ ಯೋಜನೆಯನ್ನು ಮುನ್ನೆಲೆಗೆ ತರುವುದಕ್ಕೆ ಮುಂದಾಗುತ್ತಾರೆ. ಅದಕ್ಕಿರುವ ಅಡ್ಡಿ-ಆತಂಕಗಳನ್ನು ಅವರು ತಮ್ಮದೇ ರೀತಿಯಲ್ಲಿ ನಿವಾರಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ. ಈ ನಿಟ್ಟಿನಲ್ಲಿ ಯಾರದೋ ಅಕೌಂಟ್ ಹ್ಯಾಕ್ ಮಾಡಿ, ಇನ್ನ್ಯಾರದೋ ಖಾತೆಗೆ ಹಣ ವರ್ಗಾಯಿಸುತ್ತಾರೆ ...

‘ರಣಂ’ ಕಥೆ ಕೇಳುತ್ತಿದ್ದಂತೆ ಇಲ್ಲೇನೋ ಸ್ವಾರಸ್ಯವಿದೆ ಎನಿಸಬಹುದು. ಚಿತ್ರತಂಡದವರ ಕಾಳಜಿಯ ಬಗ್ಗೆ ಹೆಮ್ಮೆ ಎನಿಸಬಹುದು. ಆದರೆ, ಚಿತ್ರ ನೋಡುವಾಗಲೂ ಹೆಮ್ಮೆ ಆಗುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಕಥೆಯೇ ಬೇರೆ, ಚಿತ್ರವೇ ಬೇರೆ. ಒಂದು ಕಥೆ ಚಿತ್ರವಾಗುವಾಗ, ಸಾಕಷ್ಟು ಬೇಡದ ಅಂಶಗಳು ಸೇರಿಕೊಳ್ಳುತ್ತವೆ. ಕಮರ್ಷಿಯಲ್ ಆಗಿಸುವ ಭರದಲ್ಲಿ ಕಾಳಜಿ ಹಿಂದೆ ಸರಿಯುತ್ತದೆ. ರಣಂನಲ್ಲಾಗುವುದೂ ಅದೇ. ಇಲ್ಲಿ ಉದ್ದೇಶವೇನೋ ಚೆನ್ನಾಗಿದೆ. ಆದರೆ, ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಹಾಡು, ಫೈಟು, ಕೆಟ್ಟ ಕಾಮಿಡಿ, ಪ್ರೇಮಕಥೆಗಳೆಲ್ಲ ಸೇರಿ ಚಿತ್ರ ನಿರಂತರವಾಗಿ ದಿಕ್ಕು ತಪು್ಪತ್ತಲೇ ಹೋಗುತ್ತದೆ. ಗಹನ ವಿಷಯವೊಂದರ ಚರ್ಚೆ ಮುಗಿಯುತ್ತಿದ್ದಂತೆಯೇ ಕಾಮಿಡಿ ಎದುರಾಗುತ್ತದೆ. ಮತ್ತೊಂದು ಟ್ವಿಸ್ಟ್ ಸಿಗುತ್ತದೆ ಎನ್ನುತ್ತಿರುವಾಗಲೇ ಹಾಡು ಪ್ರತ್ಯಕ್ಷವಾಗುತ್ತದೆ. ಇದೆಲ್ಲದರಿಂದ ಒಂದು ಗಟ್ಟಿ ಕಥೆ ದುರ್ಬಲವಾಗುತ್ತಾ ಹೋಗುತ್ತದೆ. ಗಂಭೀರ ವಿಷಯ ನೇರವಾಗಿ ಹೇಳಿದರೆ, ಅದು ಸಾಕ್ಷ್ಯ ಚಿತ್ರವಾಗುತ್ತದೆ ಎಂಬ ಕಾರಣಕ್ಕೆ ಕಮರ್ಷಿಯಲ್ ಅಂಶಗಳನ್ನು ಬೆರೆಸಿದ್ದಾರೆ. ಆದರೆ, ಅದು ಬೇರೆಯದೇ ರೂಪ ಪಡೆದಿದೆ.

ಚಿರಂಜೀವಿ ಸರ್ಜಾ ಮತ್ತು ಚೇತನ್ ಇದ್ದರೂ ಚಿತ್ರ ಸುತ್ತುವುದು ಆ ನಾಲ್ವರು ಹುಡುಗರ ಸುತ್ತಲೇ. ತಮಗೆ ಸಿಕ್ಕಿರುವ ಸಣ್ಣ ಪಾತ್ರಗಳನ್ನು ಇಬ್ಬರೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರ ಶುರುವಾಗುವುದೇ ವರಲಕ್ಷ್ಮಿಯಿಂದಾದರೂ, ಆ ನಂತರ ಅವರಿಗೆ ಹೆಚ್ಚು ಕೆಲಸವಿಲ್ಲ. ಒಂದಿಷ್ಟು ಹರಿತವಾದ ಸಂಭಾಷಣೆಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾವ ಕಲಾವಿದರ ಅಥವಾ ತಂತ್ರಜ್ಞರ ಕೆಲಸ ನೆನಪಿನಲ್ಲಿ ಉಳಿಯುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net