

ಬೆಂಗಳೂರು: 2000 ಇಸ್ವಿಯಲ್ಲಿ ಸ್ಯಾಂಡಲ್ವುಡ್ನ ಬಹುತೇಕ ಸಿನಿಮಾಗಳಲ್ಲಿ ನಾಯಕಿಯರಾಗಿ ಮಿಂಚಿದವರು ನಟಿ ರಮ್ಯಾ ಮತ್ತು ರಕ್ಷಿತಾ. ಈ ಇಬ್ಬರೂ ನಟಿಯರು ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಹವಾ ಸೃಷ್ಟಿಸಿದ್ದರು. ಸಾಲು ಸಾಲು ಹಿಟ್ ಸಿನಿಮಾ ನೀಡುತ್ತ ಅಭಿಮಾನಿ ಬಳಗದಲ್ಲೂ ಇಂದಿಗೂ ಈ ಇಬ್ಬರು ನಟಿಯರು ಕ್ವೀನ್ಗಳಾಗಿಯೇ ಉಳಿದಿದ್ದಾರೆ.
ಜತೆಯಲ್ಲಿ ಈ ಇಬ್ಬರ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎಂಬ ಸುದ್ದಿ ಆ ದಿನಗಳಲ್ಲಿಯೇ ಹರಿದಾಡಿತ್ತು. ಅಷ್ಟೇ ಅಲ್ಲ ಸಿನಿಮಾ ವಿಚಾರದಲ್ಲಿ ದೊಡ್ಡ ಪೈಪೋಟಿಯೂ ಇತ್ತು ಎಂಬುದು ಗೊತ್ತಿರುವ ವಿಚಾರ. ಇದೀಗ ಇವರಿಬ್ಬರು ಮತ್ತೆ ಒಂದಾಗಿದ್ದಾರೆ. ಅದೂ ಇನ್ಸ್ಟಾಗ್ರಾಂನಲ್ಲಿ!
ಸಿನಿಮಾ ಕ್ಷೇತ್ರದ ಜತೆಗೆ ರಾಜಕೀಯವಾಗಿಯೂ ರಮ್ಯಾ ಬಿಜಿಯಾದರು. ರಕ್ಷಿತಾ ಸಹ ಅವರ ವಿರುದ್ಧವೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಹೀಗೆ ದಿನಗಳೆದಂತೆ ರಕ್ಷಿತಾ ರಿಯಾಲಿಟಿ ಶೋಗಳತ್ತ ಗಮನ ಹರಿಸಿದರೆ, ರಮ್ಯಾ ರಾಜಕೀಯದ ಜತೆಗೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡರು.
ಇದೀಗ ಈ ನಟಿಯರು ತೆಗೆದುಕೊಂಡ ನಿರ್ಧಾರದಿಂದ ಅಭಿಮಾನಿ ಬಳಗ ಸಂಭ್ರಮ ಪಡುವಂತಾಗಿದೆ. ಅಂದರೆ ವೈರತ್ವ ಮರೆತು ಇನ್ಸ್ಟಾಗ್ರಾಂನಲ್ಲಿ ಪರಸ್ಪರರು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಈ ಮೊದಲು ಈ ನಟಿಯರು ಸಿನಿಮಾದಲ್ಲಿ ಸಕ್ರಿಯರಿದ್ದಾಗ ಸೋಷಿಯಲ್ ಮೀಡಿಯಾ ಇಷ್ಟೊಂದು ವೇಗ ಪಡೆದುಕೊಂಡಿರಲಿಲ್ಲ. ಸಿನಿಮಾದಿಂದ ದೂರವಾದ ಮೇಲೆ ಪರಸ್ಪರರು ಜಾಲತಾಣ ಖಾತೆಗಳನ್ನು ಹೊಂದಿದ್ದರೂ, ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿರಲಿಲ್ಲ. ಇದೀಗ ಒಂದಾಗಿರುವುದು ಖುಷಿಯ ವಿಚಾರವೇ ಸರಿ.