

ಬೆಂಗಳೂರು: ನಟಿ ರಮ್ಯಾ ನಿರ್ವಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರೀಕರಣ ಪೂರ್ಣಗೊಂಡಿದೆ. ರಾಜ್ ಬಿ. ಶೆಟ್ಟಿ ನಿರ್ದೇಶನದ ಜತೆಗೆ ಈ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದು, ಅವರಿಗೆ ಸಿರಿ ರವಿಕುಮಾರ್ ಜೋಡಿಯಾಗಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿ ಅಕ್ಟೋಬರ್ 5ರಂದು ರಮ್ಯಾ, ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ನ ಮೊದಲ ಚಿತ್ರ ಎಂದು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಅನೌನ್ಸ್ ಮಾಡಿದ್ದರು. ಅದರ ಬೆನ್ನಲ್ಲೇ ಚಿತ್ರತಂಡ ಒಂದೇ ಶೆಡ್ಯುಲ್ನಲ್ಲಿ ಬ್ರೇಕ್ ಪಡೆಯದೇ ಚಿತ್ರೀಕರಣ ಮಾಡಿದ್ದು, ಮಂಗಳವಾರ ಕುಂಬಳಕಾಯಿ ಪೂಜೆ ನೆರವೇರಿಸಿದ್ದಾರೆ.
ಚಿತ್ರ ಘೋಷಣೆಯಾದ ಸಂದರ್ಭದಲ್ಲಿ ರಮ್ಯಾ ತಾವು ಕೂಡ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟನೆಯಿಂದ ದೂರ ಸರಿದು, ನಿರ್ವಣಕ್ಕಷ್ಟೇ ಸೀಮಿತವಾಗಿ, ಅವರ ಜಾಗಕ್ಕೆ ‘ಸಕುಟುಂಬ ಸಮೇತ’ ನಾಯಕಿ ಸಿರಿ ರವಿಕುಮಾರ್ ಸೇರ್ಪಡೆಯಾದರು. ಈಗ ಡಾಲಿ ಧನಂಜಯ ನಾಯಕನಾಗಿರುವ ‘ಉತ್ತರಕಾಂಡ’ ಚಿತ್ರದ ಮೂಲಕ ರಮ್ಯಾ ನಾಯಕಿಯಾಗಿ ಏಳು ವರ್ಷಗಳ ನಂತರ ಕಮ್್ಯಾಕ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚಿತ್ರದ ಮುಹೂರ್ತ ನೆರವೇರಿದ್ದು, ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದರ ಜತೆಗೆ ಇನ್ನೂ ಮೂರು ಸಿನಿಮಾಗಳಲ್ಲಿ ನಟಿಸಲು ರಮ್ಯಾ ಒಪ್ಪಿದ್ದು, ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳ ಘೋಷಣೆಯಾಗಲಿದೆ. ಮತ್ತೊಂದೆಡೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಳಿಕ ರಮ್ಯಾ ಮತ್ತೊಂದು ಕ್ರೀಡಾ ಪ್ರಧಾನ ಚಿತ್ರ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.