

Ramya Krishna : ಕ್ಯಾಪ್ಟನ್ ಪ್ರಭಾಕರನ್... ಇದು ಕಳೆದ 34 ವರ್ಷಗಳಿಂದ ತಮಿಳು ಸಿನಿಪ್ರೇಮಿಗಳ ಹೃದಯದಲ್ಲಿ ಉಳಿದಿರುವ ಸಿನಿಮಾ. ದಿವಂಗತ ನಟ ಮತ್ತು ರಾಜಕಾರಣಿ ವಿಜಯಕಾಂತ್ ನಾಯಕನಾಗಿ ನಟಿಸಿದ 100ನೇ ಚಿತ್ರ ಇದು. ಆರ್.ಕೆ. ಸೆಲ್ವಮಣಿ ಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು. ಇದನ್ನು ರಾವ್ ಉತ್ತರ್ ಫಿಲ್ಮ್ಸ್ ನಿರ್ಮಾಣ ಮಾಡಿತು. ನಟಿ ರೂಪಿಣಿ, ರಮ್ಯಾ ಕೃಷ್ಣ, ಶರತ್ ಕುಮಾರ್, ಲಿವಿಂಗ್ಸ್ಟನ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಇಳಯರಾಜ ಸಂಗೀತ ನೀಡಿದರು. 1991, ಏಪ್ರಿಲ್ 14 ರಂದು ಬಿಡುಗಡೆಯಾದ ಈ ಚಿತ್ರವು ಭಾರಿ ಯಶಸ್ಸನ್ನು ಕಂಡಿತು.
ಬರೋಬ್ಬರಿ 34 ವರ್ಷಗಳ ನಂತರ, ಕ್ಯಾಪ್ಟನ್ ಪ್ರಭಾಕರನ್ ಸಿನಿಮಾ ಈ ತಿಂಗಳ 22 ರಂದು 4K ಆವೃತ್ತಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಸ್ಪ್ಯಾರೋ ಸಿನಿಮಾಸ್ ಮುಖ್ಯಸ್ಥ ಕಾರ್ತಿಕ್ ವೆಂಕಟೇಷನ್ ಇದನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ (ಆಗಸ್ಟ್ 08) ಸಂಜೆ ಚೆನ್ನೈನ ವಡಪಳನಿಯಲ್ಲಿರುವ ಕಮಲಾ ಥಿಯೇಟರ್ನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಚಿತ್ರತಂಡದ ಜೊತೆಗೆ, ನಿರ್ದೇಶಕರಾದ ಎಸ್.ಎ. ಚಂದ್ರಶೇಖರ್, ವಿಕ್ರಮನ್, ನಿರ್ಮಾಪಕ ಕಲೈಪುಲಿ ಎಸ್. ಥಾನು, ಟಿ. ಶಿವ, ಆರ್.ವಿ. ಉದಯ್ ಕುಮಾರ್, ಪೆರರಸು, ಲಿಂಗುಸ್ವಾಮಿ, ಲಿಯಾಖತ್ ಅಲಿ ಖಾನ್ ಸೇರಿದಂತೆ ಇತರ ಅನೇಕ ಚಲನಚಿತ್ರ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ವಿಜಯಕಾಂತ್ ಅವರ ಪುತ್ರ ವಿಜಯ್ ಪ್ರಭಾಕರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಎಸ್.ಎ. ಚಂದ್ರಶೇಖರ್, ಈ ಸಮಾಜ ಮತ್ತು ರಾಜಕೀಯದ ಮೇಲಿನ ತಮ್ಮ ಕೋಪವನ್ನು ಚಲನಚಿತ್ರಗಳ ಮೂಲಕ ತೋರಿಸಲು ಒಬ್ಬ ನಟ ಬೇಕಾಗಿದ್ದಾರೆ. ಅವರೇ ವಿಜಯಕಾಂತ್ ಎಂದರು. ಅಲ್ಲದೆ, ವಿಜಯಕಾಂತ್ ಅವರನ್ನು ನಾಯಕನನ್ನಾಗಿ ಮಾಡಿಕೊಂಡು 18 ಚಲನಚಿತ್ರಗಳನ್ನು ಮಾಡಿದ್ದೇನೆ ಎಂದು ಹೇಳಿದರು. ಚಲನಚಿತ್ರ ನಿರ್ದೇಶಕ ಆರ್.ಕೆ. ಸೆಲ್ವಮಣಿ ಮಾತನಾಡಿ, ಚಲನಚಿತ್ರೋದ್ಯಮದಲ್ಲಿ ನನ್ನ ಪಾಲಕರು ಯಾರಾದರೂ ಇದ್ದರೆ ಅದು ವಿಜಯಕಾಂತ್ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟಿ ರಮ್ಯಾ ಕೃಷ್ಣ, ತಮಿಳಿನಲ್ಲಿ ಸರಿಯಾದ ಯಶಸ್ಸು ಸಿಗದ ಕಾರಣ ತೆಲುಗು ಚಿತ್ರಗಳಲ್ಲಿ ನಟಿಸಿದೆ. ಆ ಸಮಯದಲ್ಲಿ ಕ್ಯಾಪ್ಟನ್ ಪ್ರಭಾಕರ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದ ಯಶಸ್ಸಿನ ಬಳಿಕ 10 ವರ್ಷಗಳ ಕಾಲ ಅವಕಾಶಗಳ ಸುರಿಮಳೆಯಾಯಿತು. ಈ ಒಂದು ಸಿನಿಮಾ ನನ್ನ ಬದುಕನ್ನೇ ಬದಲಿಸಿತು ಎಂದರು.
ವಿಜಯಕಾಂತ್ ಅವರ ಪುತ್ರ ವಿಜಯ್ ಪ್ರಭಾಕರನ್ ಮಾತನಾಡಿ, ವಿಜಯಕಾಂತ್ ಅವರ ಮಗ ಎಂಬ ಹೆಸರೇ ನನಗೆ ಸಾಕು, ಬೇರೆನೂ ಬೇಡ ಎಂದರು. ಅಲ್ಲದೆ, ಇಂದಿನಿಂದ ಪ್ರತಿ ವರ್ಷ ತಮ್ಮ ತಂದೆಯ ಚಿತ್ರಗಳಲ್ಲಿ ಒಂದನ್ನು ಮರು ಬಿಡುಗಡೆ ಮಾಡುವುದಾಗಿ ಘೋಷಿಸಿದರು. (ಏಜೆನ್ಸೀಸ್)