

ಬೆಂಗಳೂರು: ಟ್ರೇಲರ್ ಹಾಗೂ ಹಾಡಿನ ಮೂಲಕ ಸದ್ದು ಮಾಡಿದ್ದ ಆಯುಷ್ ಮಲ್ಲಿ ನಿರ್ದೇಶನದ ‘ಪಪ್ಪಿ’ ಗುರುವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೂ ಮುನ್ನ, ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್‌ಗೆ ಸ್ಯಾಂಡಲ್‌ವುಡ್ ನಟರಾದ ಧ್ರುವ ಸರ್ಜಾ, ನವೀನ್ ಶಂಕರ್, ವಿನಯ್ ರಾಜಕುಮಾರ್ ಹಾಗೂ ನಟಿ ರಮ್ಯಾ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾ ನೋಡಿರುವ ನಟಿ ರಮ್ಯಾ, ಬಾಲ ಕಲಾವಿದರ ಅಭಿನಯ ಹಾಗೂ ಚಿತ್ರದಲ್ಲಿ ಶ್ವಾನ ಪ್ರೀತಿ ತೋರಿಸಿರುವುದನ್ನು ನೋಡಿ ಖುಷಿಯಾಗಿದ್ದಾರೆ. ಮೊದಲಿನಿಂದಲೂ ರಮ್ಯಾಗೆ ಶ್ವಾನಗಳೆಂದರೆ ಪ್ರೀತಿ. ಅಂತೆಯೇ ಇದೀಗ ‘ಪಪ್ಪಿ’ ಚಿತ್ರದ ಬಾಲ ಕಲಾವಿದರಾದ ಜಗದೀಶ್ ಹಾಗೂ ಆದಿತ್ಯ ನಟನೆಗೆ ಮನಸೋತಿರುವ ಅವರು, ಇಬ್ಬರಿಗೂ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೊದಲ ಶೋ ಮುಗಿದ ಬೆನ್ನಲ್ಲೇ ಇಡೀ ಚಿತ್ರತಂಡವನ್ನು ಆಹ್ವಾನಿಸಿ, ಶುಭ ಕೋರುವ ಜತೆಗೆ ಮಕ್ಕಳಿಗೆ ಸೈಕಲ್ ಗಿಫ್ಟ್ ನೀಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಕಂಟೆಂಟ್ ಸಿನಿಮಾಗಳು ಕನ್ನಡದಲ್ಲಿ ಹೆಚ್ಚು ಬರುವಂತಾಗಲಿ ಎಂದು ಹಾರೈಸಿದ್ದಾರೆ.