ರಮ್ಯಾ ಹೊಸಯುಗ: ಸ್ಯಾಂಡಲ್‌ವುಡ್‌ಗೆ ಮರಳಲು ಸಿದ್ಧರಾದ ಮೋಹಕ ತಾರೆ

RAMYA
Published on

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ನಟಿ ರಮ್ಯಾ ಸಿನಿಮಾ ಹಾಗೂ ರಾಜಕೀಯದಿಂದ ಬಿಡುವು ಪಡೆದುಕೊಂಡಿದ್ದರು. ಈ ಮೊದಲು ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಇದೀಗ, ಒಂದು ತಿಂಗಳಲ್ಲಿ ನಾಲ್ಕು ಕಾರ್ಯಕ್ರಮಗಳಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ‘ರಾಜು ಜೇಮ್ಸ್ ಬಾಂಡ್’ ಟ್ರೇಲರ್ ಬಿಡುಗಡೆಗೆ ಬಂದು ತಂಡಕ್ಕೆ ಶುಭ ಹಾರೈಸಿದ್ದರು. ಬಳಿಕ ನಟ ಧನಂಜಯ ಮದುವೆ, ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ಮೂರು ಕಾರ್ಯಕ್ರಮಗಳ ಬೆನ್ನಲ್ಲೇ ಗುರುವಾರ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ವಿಶೇಷ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೊದಲು ಎಲ್ಲಿಯೂ ಕಾಣಿಸದ ರಮ್ಯಾ, ಒಮ್ಮಿಂದೊಮ್ಮೆಲೆ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಲ್ಲಿ ಗಮನಸೆಳೆಯುತ್ತಿರುವ ಕಾರಣವಾದರೂ ಏನು? ಮತ್ತೆ ಚಿತ್ರರಂಗಕ್ಕೆ ಆಗಮಿಸುತ್ತಾರಾ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿದ್ದು, ನಟಿ ರಮ್ಯಾ, ನಿರ್ದೇಶಕ ಯೋಗರಾಜ್ ಭಟ್‌ರ ಮುಂದಿನ ಸಿನಿಮಾದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ. 2004ರಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ರಂಗ ಎಸ್ ಎಸ್‌ಎಲ್‌ಸಿ’ ಚಿತ್ರದಲ್ಲಿ ನಟಿ ರಮ್ಯಾ, ಸುದೀಪ್‌ಗೆ ಜೋಡಿಯಾಗಿದ್ದರು. ಇದೀಗ ಬರೋಬ್ಬರಿ 20 ವರ್ಷಗಳ ಬಳಿಕ ಯೋಗರಾಜ್ ಭಟ್ ಹಾಗೂ ರಮ್ಯಾ ಹೊಸ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ರಮ್ಯಾರ ‘ಆಪಲ್ ಬಾಕ್ಸ್’ ಹಾಗೂ ಇ.ಕೃಷ್ಣಪ್ಪರ ಇ.ಕೆ.ಎಂಟರ್‌ಟೈನ್ ಬ್ಯಾನರಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುಗಾದಿ ಬಳಿಕ ಈ ಪ್ರಾಜೆಕ್ಟ್ ಶುರು ಮಾಡಲಿದ್ದಾರಂತೆ. ಇದೇ ಸಂದರ್ಭ ರಮ್ಯಾ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಯಾಂಡಲ್‌ವುಡ್‌ಗೆ ಮರಳುವ ಈ ಬಗ್ಗೆ ಸುಳಿವು ನೀಡಿದ್ದರು. ‘ ಇಂದು ನಾನಿಲ್ಲಿ ಬಂದು ಕೂರಲು ಕನ್ನಡದ ಪ್ರೇಕ್ಷಕರೇ ಕಾರಣ. ಕನ್ನಡದಲ್ಲಿ ಒಳ್ಳೆ ಪಾತ್ರವಿರುವ ಕಥೆಗಳು ಬಂದರೆ ಚಿತ್ರರಂಗಕ್ಕೆ ಮರಳುತ್ತೇನೆ. ನಮ್ಮದೇ ನಿರ್ಮಾಣ ಸಂಸ್ಥೆಯಿಂದ ನಾಲ್ಕು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗುತ್ತಿದ್ದೇವೆ. ಅದರಲ್ಲಿ ಒಂದು ಕಥೆಯಲ್ಲಿ ನಾನು ನಟಿಸಬಹುದು’ ಎಂದಿದ್ದಾರೆ.

ಮಹಿಳಾ ಕೇಂದ್ರಿತ ಸಿನಿಮಾ ವಿರಳ: ನಟಿ ರಮ್ಯಾ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಮಹಿಳೆ ಹಾಗೂ ಸಿನಿಮಾ’ ಎಂಬ ಗೋಷ್ಠಿಯಲ್ಲಿ ಭಾಗಿಯಾಗಿ, ‘ಬೇರೆ ಭಾಷೆಗಳಂತೆ ಕನ್ನಡದಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಕಡಿಮೆಯಾಗುತ್ತಿವೆ. ಹೀರೋನಾ ನೋಡಲು ಮಾತ್ರ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ ಎಂಬ ಮನಸ್ಥಿತಿಯಿಂದ ನಾವು ಹೊರಬರಬೇಕಿದೆ. ಗಟ್ಟಿ ಪಾತ್ರದ ಮಹಿಳಾ ಸಿನಿಮಾಗಳು ಬಂದಾಗ ನಿಜವಾದ ಸಮಾನತೆ ಕಾಣಬಹುದು’ ಎಂದು ಹೇಳಿದರು.

ಸಂಭಾವನೆಯಲ್ಲಿ ತಾರತಮ್ಯ ಏಕೆ?: ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದ ರಮ್ಯಾ, ‘ಒಂದು ಸಿನಿಮಾ ಯಶಸ್ವಿಯಾದರೆ ಹೀರೋಗಳು ಶೇ.50ರಷ್ಟು ಅಧಿಕ ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಮಹಿಳಾ ಕಲಾವಿದರಿಗೆ ಈ ರೀತಿ ಇಲ್ಲ. ಕೇವಲ 5ರಷ್ಟು ಮಾತ್ರ ಹೆಚ್ಚಿಸುತ್ತಾರೆ. ಕೆಲವೊಮ್ಮೆ ಅದು ಇಲ್ಲ. ಹಾಗೇ ಹೀರೋಯಿನ್‌ಗಳನ್ನು ಕೇವಲ ಗ್ಲಾಮರ್‌ಗೆ ಮಾತ್ರ ಸೀಮಿತ ಮಾಡುವುದು ತರವಲ್ಲ. ಗಟ್ಟಿ ಮಹಿಳಾ ಪಾತ್ರಗಳು ಮೂಡಿಬಂದಾಗಲೇ ಸಿನಿಮಾದಲ್ಲಿ ಮಹಿಳೆಯರು ಮುಖ್ಯ ಎಂಬ ಅಭಿಪ್ರಾಯ ಮೂಡಲು ಸಾಧ್ಯ. ಮದುವೆಯಾದ ಬಳಿಕವೂ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟಿಯರಿದ್ದಾರೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net