'ಕನ್ನಡತಿ' ಖ್ಯಾತಿಯ ರಮೋಲಾ ಚಿತ್ರರಂಗಕ್ಕೆ ಎಂಟ್ರಿ; 'ರಿಚ್ಚಿ' ಚಿತ್ರಕ್ಕೆ ನಾಯಕಿ

Richie
Published on

ಬೆಂಗಳೂರು: 'ಕನ್ನಡತಿ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್​ ಮತ್ತು ಕಿರಣ್​ ರಾಜ್​ ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ಆ ಸಾಲಿಗೆ ರಮೋಲಾ ಸಹ ಸೇರಿದ್ದಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಮೋಲಾ, ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅಂದಹಾಗೆ, ರಮೋಲಾ ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಹೆಸರು 'ರಿಚ್ಚಿ'. ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಮಡಿಕೇರಿ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

'ರಿಚ್ಚಿ' ಎಂಬುದು ಸಿನಿಮಾ‌ ಹೆಸರು ಮಾತ್ರವಲ್ಲ. ನಿರ್ದೇಶಕ ಹಾಗೂ ನಾಯಕನ ಹೆಸರು ಕೂಡ. ತಮ್ಮ ಹೆಸರನ್ನೇ ಚಿತ್ರದ ಶೀರ್ಷಿಕೆಯಾಗಿಸಿರುವ ರಿಚ್ಚಿ, ನಟನೆ ಮತ್ತು ನಿರ್ದೇಶನದ ಜತೆಗೆ ಚಿತ್ರದ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಚಿತ್ರ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ 'ರಿಚ್ಚಿ' ನಿರ್ಮಾಣವಾಗಿದೆ.

'ರಿಚ್ಚಿ' ಚಿತ್ರದಲ್ಲಿ ರಿಚ್ಚಿ ಮತ್ತು ರಮೋಲ ಜತೆಗೆ ಮನೋಜ್, ಮಿಮಿಕ್ರಿ ಗೋಪಿ, 'ಮಜಾಭಾರತ' ಚಂದ್ರಪ್ರಭ, 'ಕಾಮಿಡಿ ಕಿಲಾಡಿಗಳು' ರಾಘವೇಂದ್ರ ಮುಂತಾದವರು ಅಭಿನಯಿಸಿದ್ದಾರೆ. ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದು, ವೀರೇಶ್​ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ವಿಕ್ರೋಮ್​ ಮೋರ್​ ಮತ್ತು ಡಿಫರೆಂಟ್​ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net