ವೀಕೆಂಡ್ ವಿಥ್ ರಮೇಶ್; ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತುಕತೆ..

Ramesh
Published on

ರಮೇಶ್ ಅರವಿಂದ್ ಅಭಿನಯದ ‘100’ ಚಿತ್ರವು ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶನಿವಾರ ಬೆಳಿಗ್ಗೆ ಟ್ರೇಲರ್ ಸಹ ಬಿಡುಗಡೆಯಾಗಿದೆ. ಇದೊಂದು ಫ್ಯಾಮಿಲಿ ಥ್ರಿಲ್ಲರ್ ಎಂದು ಕರೆಯುವ ರಮೇಶ್ ಅರವಿಂದ್, ಪ್ರತಿಯೊಬ್ಬರ ಮನೆಯಲ್ಲೂ ನಡೆಯಬಹುದಾದ ಕಥೆ ಇದು ಎನ್ನುತ್ತಾರೆ. ‘ಸೈಬರ್ ಕ್ರೖೆಮ್ಂದ ಒಂದು ಕುಟುಂಬ ಹೇಗೆ ಸಮಸ್ಯೆಗೆ ಸಿಲುಕುತ್ತದೆ ಎನ್ನುವುದು ಚಿತ್ರದ ಕಥೆ. ಇಲ್ಲಿ ನಾನೊಬ್ಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳು ತ್ತಿದ್ದೇನೆ’ ಎನ್ನುತ್ತಾರೆ ರಮೇಶ್ .

ಒಟಿಟಿಯಲ್ಲಿ ವೀಕೆಂಡ್?: ಇಷ್ಟರಲ್ಲಾಗಲೇ ‘ವೀಕೆಂಡ್ ವಿಥ್ ರಮೇಶ್’ ಶುರುವಾಗಬೇಕಿತ್ತು. ಆದರೆ, ಯಾಕೋ ಯಾವುದೇ ಸೂಚನೆ ಇಲ್ಲ ಎಂದರೆ, ‘ಆ ಕಾರ್ಯಕ್ರಮದ ಕುರಿತು ಮಾತುಕತೆ ನಡೆಯುತ್ತಲೇ ಇರುತ್ತದೆ. ಯಾವ ರೀತಿ ಮಾಡೋದು, ಏನು ಮಾಡೋದು ಎಂದು ಚರ್ಚೆ ನಡೆಯುತ್ತಲೇ ಇರುತ್ತದೆ. ಡಿಜಿಟಲ್​ನಲ್ಲಿ (ಒಟಿಟಿ) ಮಾಡಿದರೆ ಹೇಗೆ ಎಂಬ ಯೋಚನೆಯೂ ಇದೆ. ಇಂಗ್ಲೀಷ್​ನಲ್ಲಿ ಮಾಡಿದರೆ, ಬೇರೆ ಸೆಲೆಬ್ರಿಟಿಗಳನ್ನು ಕರೆಸುವ ಸಾಧ್ಯತೆ ಇರುತ್ತದೆ. ಆದರೆ, ಯಾವುದೂ ಪಕ್ಕಾ ಆಗಿಲ್ಲ. ಎಲ್ಲವೂ ಇನ್ನಷ್ಟೇ ತೀರ್ಮಾನ ಆಗಬೇಕಿದೆ’ ಎನ್ನುತ್ತಾರೆ ರಮೇಶ್.

ಎಲ್ಲವೂ ಸೇರಿದ್ದರಿಂದಲೇ...

ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಬಹಳ ಭಾವುಕರಾದರು ರಮೇಶ್. ‘ಅವರು ನಿಧನರಾಗುವ ಹಿಂದಿನ ರಾತ್ರಿಯಷ್ಟೇ ಗುರುಕಿರಣ್ ಅವರ ಮನೆಯಲ್ಲಿ ಸಿಕ್ಕಿದ್ದೆವು. ಒಂದು ಮೂಲೆಯಲ್ಲಿ ಕೂತು ಇಬ್ಬರೂ ಊಟ ಮಾಡಿದೆವು. ಎರಡು ಗಂಟೆಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದವರು, ಮರುದಿನ ತಮ್ಮ ಕಣ್ಣು ದಾನ ಮಾಡಿದರು ಎಂದರೆ ಏನು ಹೇಳಬೇಕು’ ಎಂದು ಪ್ರಶ್ನಿಸುತ್ತಾರೆ ರಮೇಶ್. ಈ ಸಂದರ್ಭದಲ್ಲಿ ಡಿವಿಜಿ ಅವರ ಮಾತೊಂದನ್ನು ನೆನಪಿಸಿಕೊಂಡ ಅವರು, ‘ಹುಲ್ಲು ಹಸಿರಾಗಿರುವುದಕ್ಕೆ ಏನು ಕಾರಣ ಎಂದರೆ, ಅದಕ್ಕೆ ಒಂದೇ ಒಂದು ಕಾರಣ ಇರುವುದಿಲ್ಲ. ಬೆಳಕು, ನೀರು, ಮಣ್ಣು ... ಹೀಗೆ ಹಲವು ಕಾರಣಗಳು ಸೇರಿ ಅದು ಹಸಿರಾಗಿರುತ್ತದೆ. ಅದೇ ರೀತಿ ಪುನೀತ್ ಸಹ ಯಾವುದೋ ಒಂದು ಕಾರಣಕ್ಕೆ ಇಷ್ಟವಾಗುವುದಿಲ್ಲ. ಡ್ಯಾನ್ಸು, ಫೈಟು, ವಿನಯ, ಸರಳತೆ, ಮನೆತನ ಎಲ್ಲವೂ ಸೇರಿದ್ದರಿಂದ ಅವರನ್ನು ಜನ ಇಷ್ಟಪಡುತ್ತಾರೆ’ ಎಂದು ವ್ಯಾಖ್ಯಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net