

ಬೆಂಗಳೂರು: ಹಲವು ವರ್ಷಗಳ ಹಿಂದೆ ‘ಬಿಸಿಬಿಸಿ’ ಚಿತ್ರಕ್ಕೆ ನಾಲ್ಕು ಸಾಲು ಹಾಡಿದ್ದರು ರಮೇಶ್ ಅರವಿಂದ್. ಆ ನಂತರ ಗಾಯನದಿಂದ ದೂರವೇ ಇದ್ದ ಅವರು, ಪೂರ್ಣಪ್ರಮಾಣದ ಗಾಯಕರಾಗಿದ್ದಾರೆ. ‘100’ ಚಿತ್ರಕ್ಕೆ ಅವರೊಂದು ಹುಟ್ಟುಹಬ್ಬದ ಹಾಡನ್ನು ಹಾಡಿದ್ದು, ಆ ಹಾಡು ಇಂದು (ಸೆಪ್ಟೆಂಬರ್ 10) ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿತ್ರದಲ್ಲಿ ಹುಟ್ಟುಹಬ್ಬದ ಕುರಿತಾದ ಒಂದು ಹಾಡಿದೆ. ಸಾಮಾನ್ಯವಾಗಿ, ಹುಟ್ಟುಹಬ್ಬ ಎಂದರೆ ಇಂಗ್ಲೀಷ್ನಲ್ಲಿ ‘ಹ್ಯಾಪಿ ಬರ್ಥ್ಡೇ ಟೂ ಯೂ ...’ ಎಂಬ ಥೀಮ್ ಸಾಂಗ್ ಇದೆ. ಅಂಥದ್ದೊಂದು ಹಾಡು ಕನ್ನಡದಲ್ಲಿಲ್ಲ. ಕನ್ನಡದಲ್ಲೇ ಒಂದು ಹಾಡು ಮಾಡುವ ಆಸೆ ಇತ್ತು. ಆ ಹಾಡು ತಯಾರಾದಾಗ, ನೀವೇ ಹಾಡಿದರೆ ಚೆನ್ನ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಒತ್ತಾಯಿಸಿದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರವೇ ಬಿಡುಗಡೆಯಾಗಬೇಕಿತ್ತು. ಈಗ ನೋಡಿದರೆ, ಲಾಕ್ಡೌನ್ನಿಂದ ಎಲ್ಲವೂ ತಡವಾಗಿ, ಆ ಹಾಡು ನನ್ನ ಹುಟ್ಟುಹಬ್ಬಕ್ಕೇ ಬಿಡುಗಡೆಯಾಗುವಂತಾಗಿದೆ’ ಎನ್ನುತ್ತಾರೆ ರಮೇಶ್.
ಇನ್ನು, ಈ ಮಧ್ಯೆ ಲಾಕ್ಡೌನ್ನಲ್ಲಿ ಒಂದು ಕಥೆ ಬರೆದು ಮುಗಿಸಿದ್ದಾರಂತೆ ಅವರು. ಹಾಗೆಯೇ ಇದುವರೆಗೂ ಪ್ರಯತ್ನ ಮಾಡದ ಒಂದು ವಿಭಿನ್ನ ಜಾನರ್ನಲ್ಲಿ ಚಿತ್ರ ಮಾಡುತ್ತಿರುವುದಾಗಿ ಹೇಳುತ್ತಾರೆ ಅವರು. ‘ನಾನು ಇದುವರೆಗೂ ಕ್ರೀಡೆಯ ಕುರಿತಾಗಿ ಚಿತ್ರ ಮಾಡಿರಲಿಲ್ಲ. ಈಗ ಒಂದು ವಿಶಿಷ್ಟ ಕ್ರೀಡೆಯ ಕುರಿತು ಸ್ಕ್ರಿಪ್ಟ್ ಮಾಡಿದ್ದೇನೆ. ಕ್ಲೈಮ್ಯಾಕ್ಸ್ ಬಿಟ್ಟು ಮಿಕ್ಕೆಲ್ಲಾ ರೆಡಿಯಾಗಿದೆ. ಬಹುಶಃ ಇನ್ನು 20 ದಿನಗಳಲ್ಲಿ ಎಲ್ಲವೂ ಸಂಪೂರ್ಣವಾಗಲಿದ್ದು, ಆ ನಂತರ ಮುಂದಿನ ಕೆಲಸ ಶುರುವಾಗಲಿದೆ’ ಎನ್ನುತ್ತಾರೆ ರಮೇಶ್.