ಥಿಯೇಟರ್​ನಲ್ಲಿ ರೆಕಾರ್ಡಿಂಗ್​, ಪೈರಸಿ ಮಾಡಿದ್ರೆ... ಕ್ರಿಮಿನಲ್​ ಕೇಸ್​ ದಾಖಲಿಸುವುದಾಗಿ 'ರಾಮಾಯಣ' ಚಿತ್ರತಂಡ ಖಡಕ್​ ವಾರ್ನಿಂಗ್ | Ramayana Movie Piracy

Ramayana Movie Piracy
ಥಿಯೇಟರ್​ನಲ್ಲಿ ರೆಕಾರ್ಡಿಂಗ್​, ಪೈರಸಿ ಮಾಡಿದ್ರೆ... ಕ್ರಿಮಿನಲ್​ ಕೇಸ್​ ದಾಖಲಿಸುವುದಾಗಿ 'ರಾಮಯಾಣ' ಚಿತ್ರತಂಡ ಖಡಕ್​ ವಾರ್ನಿಂಗ್ | Ramayana Movie Piracy
Published on: 

Ramayana Movie Piracy: ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡು ಮೂರೇ ದಿನಕ್ಕೆ ಜಾಗತಿಕವಾಗಿ 375 ಕೋಟಿ ರೂ. ಗಳಿಕೆ ಕಂಡಿರುವ ನಿತೇಶ್​ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಚಿತ್ರಕ್ಕೆ ಇದೀಗ ಪೈರಸಿ ಸಂಕಷ್ಟ ಎದುರಾಗಿದೆ. ದೊಡ್ಡ ಪರದೆಯಲ್ಲಿ ಸಿನಿಮಾ ರಾರಾಜಿಸುತ್ತಿರುವಾಗಲೇ ಕೆಲ ಕಿಡಿಗೇಡಿಗಳು ಚಿತ್ರದ ಬಹುಮುಖ್ಯ ತುಣುಕುಗಳನ್ನು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಕಂಡುಬಂದಿದೆ.

ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ಇಂತಹ ಲೀಕ್ ಕ್ಲಿಪ್‌ಗಳ ಬಗ್ಗೆ ಚಿತ್ರದ ನಿರ್ಮಾಪಕರು ತೀವ್ರ ಸಿಡಿಮಿಡಿಗೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ರದ ತಯಾರಕರು, ಪೈರಸಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್​ ವಾರ್ನಿಂಗ್ ಕೂಡ ನೀಡಿದ್ದಾರೆ. ವಿಡಿಯೋ ರೆಕಾರ್ಡಿಂಗ್ ಮಾಡಿದವರಿಗೆ ಇದು ಕ್ರಿಮಿನಲ್​ ಕೇಸ್​ ಆಗಲಿದೆ ಎಂಬುದನ್ನೂ ಒತ್ತಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ, ಚಿತ್ರತಂಡವು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಕಾನೂನು ಸೂಚನೆಯನ್ನು ಹಂಚಿಕೊಂಡಿದೆ. ಥಿಯೇಟರ್‌ಗಳಲ್ಲಿ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ವಾಟ್ಸ್​ಆ್ಯಪ್​, ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳದಂತೆ ಪ್ರೇಕ್ಷಕರಿಗೆ ಮನವಿ ಮಾಡಿದೆ. ಈಗಾಗಲೇ ಇಂತಹ ಕ್ಲಿಪ್​ಗಳನ್ನು ಅಪ್ ಲೋಡ್ ಮಾಡಿರುವವರು ಕೂಡಲೇ ಡಿಲೀಟ್ ಮಾಡಬೇಕು ಎಂದೂ ಸ್ಪಷ್ಟಪಡಿಸಿದೆ.

ಹಕ್ಕುಸ್ವಾಮ್ಯ ಕಾಯ್ದೆ, 1957, ಸಿನಿಮಾಟೋಗ್ರಾಫ್ ಆಕ್ಟ್, 1952, ಬಿಎನ್‌ಎಸ್ 2023 ಮತ್ತು ಐಟಿ ಕಾಯ್ದೆ 2000ರ ಅಡಿಯಲ್ಲಿ ಸಿನಿಮಾದ ತುಣುಕುಗಳನ್ನು ರೆಕಾರ್ಡ್ ಮಾಡುವುದು ಅಥವಾ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ. ಇದು ಕ್ರಿಮಿನಲ್ ಅಪರಾಧದ ಅಡಿಯಲ್ಲಿ ಬರುತ್ತದೆ ಮತ್ತು ಅಂತಹ ಕೃತ್ಯಗಳನ್ನು ಎಸಗುವ ಯಾರಾದರೂ ಜೈಲು ಶಿಕ್ಷೆ ಮತ್ತು ನ್ಯಾಯಾಲಯದ ಉಲ್ಲಂಘನೆಗೂ ಗುರಿಯಾಗುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. ಇಷ್ಟು ಹೇಳಿದ ಮೇಲೂ ಅದೇ ತಪ್ಪು ಮುಂದುವರಿಸಿದರೆ, ಯಾವುದೇ ಮುನ್ಸೂಚನೆ ಕೊಡದೆ ಅಂಥವರು ವಿರುದ್ಧ ನೇರವಾಗಿ ಕ್ರಿಮಿನಲ್ ಮತ್ತು ಸಿವಿಲ್ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

Also Read
ಗುಲಾಬ್​ ಜಾಮೂನ್​ಗೆ ಫೇಮಸ್​ ಈ ಹಳ್ಳಿ! ಅಷ್ಟಕ್ಕೂ ಅಂಥ ವಿಶೇಷತೆ ಏನಿದೆ ಇದೊಂದು ಸ್ವೀಟ್​ನಲ್ಲಿ? | Gulab Jamun
Ramayana Movie Piracy

ವಾಸ್ತವವಾಗಿ, ಚಿತ್ರ ಬಿಡುಗಡೆಗೂ ಮೊದಲೇ, ಬಾಂಬೆ ಹೈಕೋರ್ಟ್ ಪೈರಸಿಯಿಂದ ರಕ್ಷಿಸುವ ಮಧ್ಯಂತರ ಆದೇಶವನ್ನು ನೀಡಿತ್ತು. ಗಾಡ್‌ಪವರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಕಂಪನಿ ಸಲ್ಲಿಸಿದ ಹಕ್ಕುಸ್ವಾಮ್ಯ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಮಾಧವ್ ಜಾಮ್‌ದಾರ್ ಈ ಆದೇಶವನ್ನು ನೀಡಿದ್ದಾರೆ. ಈ ಕಂಪನಿಯು ಭಾರತ ಹಾಗೂ ವಿಶ್ವದ ಹಲವೆಡೆ ರಾಮಾಯಣದ ವಿತರಣಾ ಹಕ್ಕುಗಳನ್ನು ಹೊಂದಿದೆ. ಚಿತ್ರದ ಸ್ಕ್ರಿಪ್ಟ್, ಪಾತ್ರಗಳು, ದೃಶ್ಯಾವಳಿಗಳು, ಸಾಹಿತ್ಯ ಮತ್ತು ಆಡಿಯೊ ರೆಕಾರ್ಡಿಂಗ್‌ಗಳ ಸಂಪೂರ್ಣ ಹಕ್ಕುಸ್ವಾಮ್ಯವನ್ನು ಹೊಂದಿದೆ ಎಂದು ಪ್ರೊಡಕ್ಷನ್ ಹೌಸ್ ನ್ಯಾಯಾಲಯಕ್ಕೆ ತಿಳಿಸಿತ್ತು,(ಏಜೆನ್ಸೀಸ್).