ಶಿಲ್ಪಾ ಶೆಟ್ಟಿ ಈಗ ಮಾರ್ಗಿ; ರಾಮಾಚಾರಿಗೆ ಸಿಕ್ಕ ನಾಯಕಿ

Shilpa Shetty
Published on

ಬೆಂಗಳೂರು: ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಇದೀಗ ಮಾರ್ಗರೇಟ್ ಆಗುವ ಭರದಲ್ಲಿದ್ದಾರೆ! ಹಾಗಂತ ಹೆಸರು ಬದಲಾಯಿಸಿಕೊಳ್ಳುತ್ತಿದ್ದಾರಾ ಎಂದುಕೊಳ್ಳಬೇಡಿ. ತೇಜಸ್ ಅಭಿನಯದ ‘ರಾಮಾಚಾರಿ 2.0’ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದ್ದು, ಆ ಚಿತ್ರದಲ್ಲಿ ಶಿಲ್ಪಾ ಮಾರ್ಗರೇಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಮಾಚಾರಿ ಎಂಬ ಹೆಸರು ಮೊದಲು ಕೇಳಿಬಂದಿದ್ದು ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಲ್ಲಿ. ವಿಷ್ಣುವರ್ಧನ್ ಅಭಿನಯದ ಈ ಪಾತ್ರ ಅದೆಷ್ಟು ಜನಪ್ರಿಯವಾಗಿದೆಯೆಂದರೆ, ಈಗಲೂ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಆ ನಂತರ ರವಿಚಂದ್ರನ್ ಅವರು ‘ರಾಮಾಚಾರಿ’ ಹೆಸರಿನ ಚಿತ್ರದಲ್ಲಿ ನಟಿಸಿದರು. ಅದಾಗಿ ಎಷ್ಟೋ ವರ್ಷಗಳ ನಂತರ, ಯಶ್ ಸಹ ‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’ ಚಿತ್ರದಲ್ಲಿ ರಾಮಾಚಾರಿಯಾಗಿ ಅಭಿನಯಿಸಿದರು. ಈ ಮೂರೂ ಪಾತ್ರಗಳ ವೈಶಿಷ್ಟ್ಯವೇ ಬೇರೆ ಬೇರೆಯಾಗಿತ್ತು. ಇದೀಗ ನಾಲ್ಕನೇ ರಾಮಾಚಾರಿ ಚಾಣಾಕ್ಷನಾಗಿ, ಬುದ್ಧಿವಂತನಾಗಿ ಕಾಣಿಸಿಕೊಳ್ಳಲಿದ್ದಾನಂತೆ. ಮಾರ್ಗರೇಟ್ ಪಾತ್ರ ಸಿಕ್ಕಿದ್ದೇ ತಡ ಬೇರೇನೂ ವಿಚಾರಿಸದೇ ಚಿತ್ರಕ್ಕೆ ಸಹಿ ಹಾಕಿದ್ದಾರಂತೆ ಶಿಲ್ಪಾ ಶೆಟ್ಟಿ.

ಈ ಕುರಿತು ಮಾತನಾಡಿರುವ ಅವರು, ‘ಆ ಹೆಸರಿನಲ್ಲಿಯೇ ಒಂದು ತಾಕತ್ತಿದೆ. ಪುಟ್ಟಣ್ಣ ಅವರ ಚಿತ್ರದಲ್ಲಿ ಶುಭಾ ಅವರು ಮಾರ್ಗರೇಟ್ ಆಗಿದ್ದರೆ, ಇತ್ತೀಚಿನ ದಿನಗಳಲ್ಲಿ ಅದೇ ಪಾತ್ರವನ್ನು ರಾಧಿಕಾ ಪಂಡಿತ್ ಮಾಡಿದ್ದರು. ಇದೀಗ ಅದೇ ಹೆಸರಿನ ಪಾತ್ರ ನನಗೆ ಸಿಕ್ಕಿದೆ. ಒಂದಿಷ್ಟು ಭಯ ಇದ್ದೇ ಇದೆ. ಮಂಡ್ಯ ಸುತ್ತಮುತ್ತಲಿನ ಹಳ್ಳಿಗಾಡಿನಲ್ಲಿ ನಡೆಯುವ ಕಥೆಯಿದು. ಬಹುಶಃ ಜನವರಿಗೆ ಸಿನಿಮಾ ಶೂಟಿಂಗ್ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ. ಇನ್ನು ಕನ್ನಡದಲ್ಲಿ ‘ನ್ಯೂರಾನ್’ ಸಿನಿಮಾ ಮಾಡಿರುವ ಶಿಲ್ಪಾ, ಸದ್ಯ ರಮೇಶ್ ಅರವಿಂದ್ ಅವರ ಜತೆ ನಟಿಸಿರುವ ‘100’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇತ್ತ ತುಳುವಿನ ಸೂಪರ್ ಹಿಟ್ ಚಿತ್ರ ‘ಗಿರ್​ಗಿಟ್’ ಮರು ಬಿಡುಗಡೆ ಆಗುತ್ತಿದ್ದು, ಹೊಸ ಹೊಸ ಅವಕಾಶಗಳೂ ಅವರನ್ನು ಅರಸಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net