

ಚಿತ್ರ: ದಿಲ್ಮಾರ್
ನಿರ್ದೇಶನ: ಚಂದ್ರಮೌಳಿ
ತಾರಾಗಣ: ರಾಮ್ ಗೌಡ, ಸಾಯಿಕುಮಾರ್, ಡಿಂಪಲ್ ಹಯಾತಿ, ಅದಿತಿ ಪ್ರಭುದೇವ, ಶರತ್ ಲೋಹಿತಾಶ್ವ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಮಂಗಳೂರಿನ ಡಾನ್ ಭಾರ್ಗವ ಅಲಿಯಾಸ್ ಗುಡ್ ಬಾಯ್ನ (ಸಾಯಿಕುಮಾರ್) ತಂದೆಯ ಆರನೇ ಹೆಂಡತಿಯ ಮಗನ ಕೊಲೆಯಾಗಿರುತ್ತದೆ. "ತಿಂಡಿ ತಿಂದಿಲ್ವಾ? ಹಸಿವಾಗ್ತಿದ್ಯಾ? ತಗೋ ಬುಲೆಟ್ ತಿನ್ನು' ಎಂದು ಶೂಟ್ ಮಾಡುವ ಈ ಸೈಕೋ ಡಾನ್, ಸಹೋದರ ಧೂಳ್ ಪ್ರಕಾಶನ ಕೊಲೆಗಾರನನ್ನು ಹುಡುಕತೊಡಗುತ್ತಾನೆ. ಮತ್ತೊಂದೆಡೆ ಶಾನೆ ಗೌಡರ (ಶರತ್) ಮಗಳು ಅಕ್ಷತಾ (ಅದಿತಿ) ಹಿಂದೆ ಬೀಳುವ ಎಲೆಕ್ಟ್ರೀಷಿಯನ್ ಶುಕ್ಲ (ರಾಮ್), "ಓಂ' ಚಿತ್ರದ ಸತ್ಯನಂತೆ "ಐ ಲವ್ ಯೂ, ಯೂ ಮಸ್ಟ್ ಲವ್ ಮೀ' ಅಂತ ಆಕೆಯನ್ನು ಪೀಡಿಸುತ್ತಿರುತ್ತಾನೆ. ಈ ಶುಕ್ಲನೋ ಸೈಕೋ ಭಾರ್ಗವನಿಗಿಂತ ದೊಡ್ಡ ಸೈಕೋ. ಯಾರೋ ನಡೆಯುವ ಸ್ಪೆಷಲ್ ಇಷ್ಟವಾಗಲಿಲ್ಲ ಅಂತ ಹೊಡೆಯುವುದು, ಯಾರದ್ದೋ ಹೆಣ ಹೂಳಲು ತೆಗೆದಿದ್ದ ಗುಂಡಿಯಲ್ಲಿ ತೊಟ್ಟಿಲು ಅಂತ ಮಲಗುವುದು, ದೇವರು ಎಲ್ಲೆಡೆ ಇದ್ದಾನೆ ಅಂತ ಲೈಟ್ ಕಂಬಕ್ಕೆ ಪೂಜೆ ಮಾಡುವುದು, ಕ್ಲೋಸ್ ಫ್ರೆಂಡ್ ಸತ್ತ ಅಂತ ನಗುವುದು, ತನ್ನ ಮೆದುಳಿನ ಮಾತನ್ನು ಕೇಳಬಾರದು ಅಂತ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು... ಹೀಗೆ ಅವನದು ವಿಲಕ್ಷಣ ಬದುಕು. ಇಂತಹ ಶುಕ್ಲ ನನಗೆ ಯಾರೆಂದೇ ಗೊತ್ತಿಲ್ಲ ಎಂಬುದು ಅಕ್ಷತಾ ವಾದ. ಜತೆಗೆ ಅಕ್ಷತಾ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ವಿಶಾಲ್ ಜತೆ ಆಕೆಯ ತಂದೆ ಮದುವೆ ಫಿಕ್ಸ್ ಮಾಡಿರುತ್ತಾರೆ. ಆದರೆ ಶುಕ್ಲ, "ಅವನನ್ನು ಬಿಡು, ನನ್ನ ಲವ್ ಮಾಡು' ಅಂತ ಆಕೆಗೆ ಕಾಟ ಕೊಡಲಾರಂಭಿಸುತ್ತಾನೆ. ಅಲ್ಲಿಂದ ಈ ಶುಕ್ಲನ ಫ್ಲ್ಯಾಶ್ಬ್ಯಾಕ್ ತೆರೆದುಕೊಳ್ಳುತ್ತದೆ.
ಮೊದಲರ್ಧ "ಓಂ' ಸತ್ಯ ಮತ್ತು ದ್ವೀತಿಯಾರ್ಧದಲ್ಲಿ "ಉಪೇಂದ್ರ' ಪಾತ್ರವನ್ನು ನೆನಪಿಸುತ್ತಾರೆ ನಾಯಕ ರಾಮ್ ಗೌಡ. ಮೊದಲ ಚಿತ್ರದಲ್ಲೇ ಆ್ಯಂಟಿ ಹೀರೋ ಆಗಿ ಉತ್ತಮ ಅಭಿನಯ ನೀಡಿದ್ದಾರೆ. ಸಾಯಿಕುಮಾರ್ ಕಂಚಿನ ಕಂಠದ ಮುಂದೆ ಅವರ ಧ್ವನಿ ಮತ್ತಷ್ಟು ಗಟ್ಟಿಯಾಗಿದ್ದರೆ ಸಿನಿಮಾ ಇನ್ನಷ್ಟು ಮಜವಾಗಿರುತ್ತಿತ್ತು. "ಅಗ್ನಿ ಐಪಿಎಸ್', "ಪೊಲೀಸ್ ಸ್ಟೋರಿ'ಯಲ್ಲಿ ಖಡಕ್ ಖಾಕಿಯ ವಿಂಟೇಜ್ ಸಾಯಿಕುಮಾರ್ ಅನ್ನು "ದಿಲ್ಮಾರ್' ವಿಲನ್ ಸಾಯಿಕುಮಾರ್ ನೆನಪಿಸುತ್ತಾರೆ.
"ಕೆಜಿಎಫ್ ಚಾಪ್ಟರ್ 1' ಸಂಭಾಷಣೆಕಾರ ಚಂದ್ರಮೌಳಿ ಚೊಚ್ಚಲ ಬಾರಿಗೆ ಆ್ಯಕ್ಷನ್&ಕಟ್ ಹೇಳಿರುವ "ದಿಲ್ಮಾರ್'ನಲ್ಲಿ ಉತ್ತಮ ಡೈಲಾಗ್ಸ್ ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. ಅಂತಹ ಡೈಲಾಗ್ಸ್ ಚಿತ್ರದಾದ್ಯಂತ ನೋಡಿಸಿಕೊಂಡು ಹೋಗುತ್ತವೆ. ಜತೆಗೆ ಭರ್ಜರಿ ಸಾಹಸ ಸನ್ನಿವೇಶಗಳು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಅದಿತಿ, ಹಯಾತಿ, ಶರತ್ ಸೇರಿ ಎಲ್ಲರೂ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ ಚಿತ್ರಕ್ಕೆ ಪೂರಕವಾಗಿವೆ.