ನಂಗೇನೂ ಆಗಿಲ್ಲ, ಸುಮ್ನೆ ಖುಷಿಪಡಬೇಡಿ ... ಆರ್​ಜಿವಿ ಹೀಗೆ ಹೇಳಿದ್ದ್ಯಾಕೆ?

RGV - Final
Published on

ಹಿರಿಯ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಸುಮ್ಮನೆ ಇದ್ದವರನ್ನೇ ಬಿಡುವುದಿಲ್ಲ, ಇನ್ನು ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಡುತ್ತಾರಾ? ಖಂಡಿತಾ ಇಲ್ಲ ಎಂದು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಯಾಕೆ ಈ ವಿಷಯ ಈಗ ಅಂದರೆ, ಕಳೆದ ಕೆಲವು ತಿಂಗಳುಗಳಿಂದ ನಾನ್​ಸ್ಟಾಪ್​ ದುಡಿಯುತ್ತಿರುವ ಆರ್​ಜಿವಿಗೆ ಹುಷಾರಿಲ್ಲ, ಅವರಿಗೆ ಜ್ವರವಂತೆ, ಅವರು ಹಾಸಿಗೆ ಹಿಡಿದಿದ್ದಾರಂತೆ, ಅವರ ಚಿತ್ರಗಳ ಕಥೆಯೇನು ... ಎಂಬಂತಹ ಸುದ್ದಿಗಳು ಇದೀಗ ಟಾಲಿವುಡ್​ನಲ್ಲಿ ಹಬ್ಬಿಬಿಟ್ಟಿದೆ.

ಮೊದಲೇ ಟಾಲಿವುಡ್​ನಲ್ಲಿ ವರ್ಮಾ ಕಂಡರೆ ಬಹಳಷ್ಟು ಜನರಿಗೆ ಅಸಹನೆ. ಏಕೆಂದರೆ, ವರ್ಮಾ ಟಾಲಿವುಡ್​ ಸೆಲೆಬ್ರಿಟಿಗಳ ಕುರಿತಾಗಿ ಒಂದರಹಿಂದೊಂದು ವಿವಾದಾತ್ಮಕ ಚಿತ್ರಗಳನ್ನು ಮಾಡುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಪವನ್​ ಕಲ್ಯಾಣ್ ಕುರಿತು 'ಪವರ್​ ಸ್ಟಾರ್​' ಎಂಬ ಚಿತ್ರವನ್ನು ಅವರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಾಲಕೃಷ್ಣ, ಉದಯ್​ ಕಿರಣ್​ ಸೇರಿದಂತೆ ಇನ್ನಷ್ಟು ಜನರ ಕುರಿತಾಗಿ ಅವರು ಚಿತ್ರ ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಇದೆ. ಹೀಗಿರುವಾಗಲೇ ವರ್ಮಾಗೆ ಅನಾರೋಗ್ಯ ಎಂಬ ಸುದ್ದಿಯೊಂದು ಟಾಲಿವುಡ್​ನಲ್ಲಿ ಕೇಳಿ ಬಂದಿದೆ.

ಆದರೆ, ಇದೊಂದು ಸುಳ್​ಸುದ್ದಿ, ಸುಮ್ಮನೆ ಖುಷಿಪಡಬೇಡಿ ಎಂದು ವರ್ಮಾ ತಿಳಿಸಿದ್ದಾರೆ. ಅಷ್ಟೇ ಅಲ್ಲ, ತಾವು ಡಂಬೆಲ್​ ಎತ್ತುತ್ತಿರುವ ಫೋಟೋಗಳನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದ್ದು, ತಾವು ಆರಾಮಾಗಿರುವುದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನನ್ನ ಬಗ್ಗೆ ಸಖತ್​ ರೂಮರ್​ಗಳು ಹಬ್ಬಿವೆ. ಆದರೆ, ನನಗೇನೂ ಇಲ್ಲ. ಸೂಪರ್​ ಫಿಟ್​ ಆಗಿದ್ದೇನೆ. ನಾನ್​-ಸ್ಟಾಪ್​ ಕೆಲಸ ಮಾಡುತ್ತಿರುವ ನಾನು, ಕೆಲವು ಆಸಕ್ತಿಕರ ಸಿನಿಮಾಗಳನ್ನು ಮಾಡುತ್ತಿದ್ದೇನೆ. ನನಗೆ ಹುಷಾರಿಲ್ಲ ಎಂದು ಕೆಲವರಿಗೆ ಖುಷಿಯಾಗಿರಬಹುದು. ಆದರೆ, ನಾನು ಸಖತ್​ ಫಿಟ್​ ಆಗಿದ್ದೇನೆ' ಎಂದು ಅವರು ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net