

ನವದೆಹಲಿ: ಜಾಗತಿಕ ಕ್ರೀಡಾ ಹಬ್ಬ 33ನೇ ಆವೃತ್ತಿಯ ಒಲಿಂಪಿಕ್ಸ್ಗೆ ಬೆಳಕಿನ ನಗರಿ ಪ್ಯಾರಿಸ್ನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಮಳೆಯ ಆರ್ಭಟದ ನಡುವೆಯು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಯಶಸ್ವಿಯಾಗಿ ಉದ್ಘಾಟನಾ ಸಭಾರಂಭ ನೆರವೇರಿಸಿದ್ದಾರೆ.
ಈ ಅದ್ಧೂರಿ ಸಮಾರಂಭದಲ್ಲಿ ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಕುಟುಂಬ ಸಮೇತ ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆ ಆಗುತ್ತಿದೆ ಎಂದು ಅವರು ಫೋಟೋ ಕೂಡ ಶೇರ್ ಮಾಡಿದ್ದಾರೆ.
ಸಮಾರಂಭದ ಹಲವು ಫೋಟೋಗಳನ್ನು ಆರ್ಆರ್ಆರ್ ಸಿನಿಮಾದ ನಾಯಕ ರಾಮ್ಚರಣ್ ಅವರ ಪತ್ನಿ ಉಪಾಸನಾ ಅವರು ಹಂಚಿಕೊಂಡಿದ್ದಾರೆ. ಉಪಾಸನಾ ತಮ್ಮ ಪೋಸ್ಟ್ಗಳಲ್ಲಿ ಚಿರಂಜೀವಿ ಮತ್ತು ಸುರೇಖಾ ಪ್ಯಾರಿಸ್ನ ಬೀದಿಗಳಲ್ಲಿ ನಡೆಯುವ ದೃಶ್ಯಾವಳಿಗಳನ್ನು ತನ್ನ ಕ್ಯಾಮರೆರಾದಲ್ಲಿ ಸೆರೆಹಿಡಿದಿದ್ದಾರೆ.
ಜೂನ್ 15 ರಂದು, ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ದಂಪತಿಗಳು ತಮ್ಮ 12 ವರ್ಷಗಳ ವೈವಾಹಿಕ ವಾರ್ಷಿಕೋತ್ಸವನ್ನು ಆಚರಿಸಿದರು. ದಂಪತಿಗಳು ತಮ್ಮ ಮಗಳು ಕ್ಲಿನ್ ಕಾರಾ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.
33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ಗೆ ಇಂದಿನಿಂದ ಅಧಿಕೃತ ಚಾಲನೆ ದೊರೆತಿದ್ದು ಕ್ರೀಡಾಕೂಟದಲ್ಲಿ ಕೆಲವು ಕ್ರೀಡೆಗಳು ನಿನ್ನೆಯಿಂದಲೇ ಆರಂಭವಾಗಿದ್ದವು. ಇದೀಗ ಅಧಿಕೃತ ಚಾಲನೆಯ ಮೊದಲ ದಿನ ಶೂಟಿಂಗ್ನಲ್ಲಿ ಭಾರತಕ್ಕೆ ಗುಡ್ ನ್ಯೂಸ್ ಲಭಿಸಿದೆ.
ಭಾರತದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಮನು ಅರ್ಹತಾ ಸ್ಪರ್ಧೆಯಲ್ಲಿ 600 ಅಂಕಗಳಿಗೆ 580 ಅಂಕಗಳನ್ನು ಗಳಿಸಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವುದರೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಒಟ್ಟು 45 ಅಥ್ಲೀಟ್ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಗಳಿಸಿದ ಮನು ಮೂರನೇ ಸ್ಥಾನ ಗಳಿಸಿದರೆ, ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಇನ್ನೋರ್ವ ಶೂಟರ್ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.