

ಬೆಂಗಳೂರು: ನಟನೆ ಮತ್ತು ನಿರ್ದೇಶನದ ಜತೆಗೆ ನಿರ್ವಣದಲ್ಲಿಯೂ ರಕ್ಷಿತ್ ಶೆಟ್ಟಿ ಸಕ್ರಿಯರಾಗಿದ್ದಾರೆ. ಪರಂವಾ ಸ್ಟುಡಿಯೋಸ್ನಲ್ಲಿ ಈಗಾಗಲೇ ಎರಡ್ಮೂರು ಚಿತ್ರಗಳನ್ನು ನಿರ್ವಿುಸುತ್ತಿದ್ದಾರೆ. ಈ ಸಾಲಿಗೆ, ಸೋಮವಾರ ಇನ್ನೊಂದು ಹೊಸ ಸಿನಿಮಾ ಸೇರ್ಪಡೆಯಾಗಿದೆ. ಅದೇ ‘ಆಬ್ರಕಡಾಬ್ರ’. ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.
ಹಾಗಾದರೆ, ಚಿತ್ರದ ಮುಖ್ಯಭೂಮಿಕೆಯಲ್ಲಿ ಯಾರೆಲ್ಲ ಇರಲಿದ್ದಾರೆ? ಸದ್ಯ ಹೊರಬಂದಿರುವ ಪೋಸ್ಟರ್ನಲ್ಲಿ ಆ ವಿಚಾರವನ್ನೂ ತಂಡ ಬಹಿರಂಗಪಡಿಸಿದೆ. ಹಿರಿಯ ನಟ ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರೆ, ‘ಅರಿಷಡ್ವರ್ಗ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಅನುಭವ ಇರುವ ಸಿರಿ ರವಿಕುಮಾರ್ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿ.ವಿ. ಶೃಂಗ, ಅವಿನಾಶ್ ರೈ ಇನ್ನುಳಿದ ಪಾತ್ರವರ್ಗದಲ್ಲಿದ್ದಾರೆ.
ಪರಂವಾ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ವಣವಾಗುತ್ತಿರುವ ಈ ಚಿತ್ರಕ್ಕೆ ಜಿ.ಎಸ್. ಗುಪ್ತಾ ಪಾಲುದಾರರಾಗಿದ್ದಾರೆ. ಶಿಶಿರ್ ರಾಜಮೋಹನ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುವ ಮೂಲಕ ಎರಡು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಪೋಸ್ಟರ್ನಲ್ಲಿ ನೀಡಿದೆ.