

ಬೆಂಗಳೂರು: ‘ಒಂದು ಮೊಟ್ಟೆಯ ಕಥೆ’ ನಂತರ ರಾಜ್ ಬಿ. ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿರುವ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ಅವರು ತಮ್ಮ ಪರಂವಾ ಪಿಕ್ಚರ್ಸ್ನಡಿ ತೆರೆಗೆ ತರುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಗರುಡ ಗಮನ ವೃಷಭ ವಾಹನ’ ಚಿತ್ರವು 2020ರ ಜೂನ್ನಲ್ಲೇ ಬಿಡುಗಡೆಯಾಗಬೇಕಿತ್ತು. ಈಗ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ರಕ್ಷಿತ್ ಮುಂದಾಗಿದ್ದು, ವಿತರಣೆ ಮತ್ತು ಬಿಡುಗಡೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ರಕ್ಷಿತ್, ‘ಒಂದು ಸಿನಿಮಾ ನಮ್ಮನ್ನು ಮೂರು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವುದು ಅದರ ಸಾಮರ್ಥ್ಯ. ಆದರೆ, ಅದೇ ಸಿನಿಮಾ ದಿನಗಟ್ಟಲೆ ಕಾಡುತ್ತಿದೆ ಅಂದರೆ ಅದು ನಮ್ಮನ್ನು ಆವರಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಅದು ಬರೀ ಸಾಮರ್ಥ್ಯವಲ್ಲ, ಅದನ್ನು ಮೀರಿದ ಶಕ್ತಿ. ಇಂತಹ ಕಲಾ ಕನಸಿನೊಂದಿಗೆ ಕೈ ಜೋಡಿಸುವುದು, ನನ್ನ ಕನಸು ನನಸಾದಷ್ಟೇ ಸಂತೋಷ. ಪರಂವಾ ಸ್ಟುಡಿಯೋಸ್ ಮೂಲಕ ಇದನ್ನು ನಿಮಗೆ ಅರ್ಪಿಸುತ್ತಿದ್ದೇವೆ’ ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ.