ಮೊದಲು ಮಾನವರಾಗೋಣ ... ರಶ್ಮಿಕಾ ಬಗ್ಗೆ ಮಾತಾಡಿದವರ ಬಗ್ಗೆ ರಕ್ಷಿತ್ ಬೇಸರ

Rakshith - Rashmika
Published on

ಬೆಂಗಳೂರು: ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎನ್ನವ ಹಾಗೆ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್‌ಅಪ್ ಆಗಿ ಇಬ್ಬರೂ ದೂರವಾದರೂ, ಆ ವಿಷಯವನ್ನು ಪದೇಪದೇ ಕೆದುಕುವವರಿಗೆ ಕೊರತೆ ಇಲ್ಲ. ಆ ವಿಷಯದ ಬಗ್ಗೆ ಇಬ್ಬರಿಗೂ ಮಾತನಾಡುವುದಕ್ಕೆ ಇಷ್ಟವಿಲ್ಲದಿದ್ದರೂ, ಆಗಾಗ ಈ ವಿಷಯವನ್ನು ಅವರೆದುರು ಕೆಲವರು ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಇದು ಪುನರಾವರ್ತನೆಯಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘777 ಚಾರ್ಲಿ’ ಚಿತ್ರದ ಟೀಸರ್‌ಗೆ ಸಿಕ್ಕ ಪ್ರತಿಕ್ರಿಯೆ ಕಂಡು ಖುಷಿಯಾದ ರಕ್ಷಿತ್ ಮತ್ತು ನಿರ್ದೇಶಕ ಕಿರಣ್ ರಾಜ್, ಆ ಯಶಸ್ಸಿಗೆ ಕಾರಣರಾದವರಿಗೆ ಥ್ಯಾಂಕ್ಸ್ ಹೇಳಲು ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ಸಂದರ್ಭದಲ್ಲಿ ಹಲವರು ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಎಳೆದು ತರುವುದರ ಜತೆಗೆ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಬೇಸರಗೊಂಡ ರಕ್ಷಿತ್ ಶೆಟ್ಟಿ, ಯಾರಿಗೂ ಅಗೌರವ ತೋರಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಕೆಲವು ಕಾಮೆಂಟ್‌ಗಳನ್ನು ಕೇಳುವುದಕ್ಕೆ ಬಹಳ ಬೇಸರವಾಗುತ್ತದೆ. ಅದು ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ದಯವಿಟ್ಟು ಹಳೆಯದನ್ನು ಬಿಟ್ಟು ಹೊಸದರ ಬಗ್ಗೆ ಮಾತಾಡೋಣ. ಮುಗಿದ ವಿಷಯಗಳನ್ನು ಪುನಃ ಮಾತಾಡಿ ಯಾವುದೇ ಪ್ರಯೋಜನವಿಲ್ಲ. ಯಾರಿಗೂ ನಾವು ಅಗೌರವ ತೋರಿಸಬಾರದು. ಆ ನಂತರ ನಮ್ಮ ಮೇಲೆ ನಾವು ಅಸಹ್ಯ ಪಟ್ಟುಕೊಳ್ಳಬಾರದು. ಮೊದಲು ಮಾನವರಾಗೋಣ. ಎಲ್ಲರಿಗೂ ಗೌರವ ಕೊಡೋಣ. ಎಲ್ಲರಿಗೂ ಅವರದ್ದೇ ಆದ ಬದುಕಿರುತ್ತದೆ. ಇಲ್ಲಿ ಬೇರೆ ತರಹ ಕಾಮೆಂಟ್‌ಗಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ. ನಮ್ಮ ಸಿನಿಮಾ ಬಗ್ಗೆ ಮಾತಾಡೋಕೆ ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net