rakshasha film review: ಅಪೂರ್ಣ ಕಥೆಯಲ್ಲಿ ಹಾರರ್ ಸಂಚಲನ

rakshasha
Published on

ಚಿತ್ರ: ರಾಕ್ಷಸ

ನಿರ್ದೇಶನ: ಎಚ್.ಲೋಹಿತ್

ತಾರಾಗಣ: ಪ್ರಜ್ವಲ್ ದೇವರಾಜ್, ಸೋನಲ್ ಮೊಂಟೇರೊ, ಕೆ.ಎಸ್.ಶ್ರೀಧರ್, ಶೋಭರಾಜ್, ಮಾ.ಅರ್ನ ರಾಥೋಡ್

ರೇಟಿಂಗ್: 3

ಶಿವ ಸ್ಥಾವರಮಠ

ಸಸ್ಪೆಂಡ್ ಆಗಿ ಮೂರು ವರ್ಷಗಳಿಂದ ಮನೆಯಲ್ಲಿರುವ ಅಧಿಕಾರಿ ಸತ್ಯ (ಪ್ರಜ್ವಲ್). ಒಂದು ಕೇಸ್‌ನ ವಿಚಾರವಾಗಿ ಪೊಲೀಸ್ ಕಮಿಷನರ್ (ಶೋಭರಾಜ್) ಸತ್ಯನಿಗೆ ಮತ್ತೆ ಡ್ಯೂಟಿಗೆ ಹಾಜರಾಗುವಂತೆ ಸೂಚಿಸುತ್ತಾನೆ. ಮನಪೂರ್ವಕವಾಗಿ ಒಪ್ಪಿಗೆ ಇಲ್ಲದಿದ್ದರೂ ಆತ ಪೊಲೀಸ್ ಠಾಣೆಗೆ ಬರುತ್ತಾನೆ. ಸ್ಟೇಷನ್‌ನಲ್ಲಿರುವ ಮೂವರು ಕೈದಿಗಳು ಪರಾರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸತ್ಯನ ಮೇಲಿರುತ್ತದೆ. ಆಗ ಆತನಿಗೆ ವಿಚಿತ್ರ ಅನುಭವಗಳಾಗುತ್ತವೆ. ಇದರಿಂದ ಸತ್ಯ ಭಾರೀ ಮಾನಸಿಕ ತೊಳಲಾಟ ಅನುಭವಿಸುತ್ತಾನೆ. ಕೊನೆಗೆ ಗುಂಡಿಟ್ಟುಕೊಂಡು ಸಾಯುವ ಸ್ಥಿತಿಗೆ ತಲುಪುತ್ತಾನೆ. ಅಷ್ಟಕ್ಕೂ ಸತ್ಯನಿಗೆ ಮಾನಸಿಕವಾಗಿ ಹಿಂಸಿಸಿದ ಅಮಾನುಷ ಶಕ್ತಿ ಯಾವುದು ಎಂದು ತಿಳಿಯಬೇಕಾದರೆ ನೀವು ‘ರಾಕ್ಷಸ’ ಸಿನಿಮಾ ನೋಡಬೇಕಷ್ಟೆ.

ನಿರ್ದೇಶಕ ಲೋಹಿತ್ ಒಂದು ವಿಚಿತ್ರ ಅನುಭವ ನೀಡುವ ಕಥೆ ಹೇಳಿದ್ದಾರೆ. ಕಥೆ ಪೂರ್ಣಗೊಳಿಸದೆ ಮುಂದಿನ ಭಾಗದಲ್ಲಿ ಹೇಳುವ ಭರವಸೆ ನೀಡಿದ್ದಾರೆ. ಆದರೆ, ಮುಂದಿನ ಭಾಗವನ್ನು ನೋಡಲೇಬೇಕು ಎನ್ನುವ ಕುತೂಹಲವನ್ನು ಇನ್ನಷ್ಟು ಪರಿಣಾಮಕಾರಿ ಸೃಷ್ಟಿಸಲು ಅವಕಾಶವಿತ್ತು. ಮೊದಲಿಗೆ ಪೌರಾಣಿಕ ಕಥೆಯನ್ನು ನಿರೂಪಿಸಿದ್ದು, ಅದರ ಬಳಿಕ ಮನುಷ್ಯನ ಮಾನಸಿಕ ‘ರಾಕ್ಷಸ’ ಪ್ರವೃತ್ತಿಯ ಬಗ್ಗೆ ತಿಳಿಸಿದ್ದಾರೆ. ಪುರಾಣ, ಹಾರರ್, ಸೈಕಾಲಜಿ ಎಲ್ಲ ಅಂಶಗಳನ್ನು ಒಟ್ಟಿಗೆ ಸೇರಿಸಿದ್ದು, ಅದನ್ನು ಟೈಮ್ ಲೂಪ್ ಹಾರರ್ ಶೈಲಿಯಲ್ಲಿ ನಿರೂಪಿಸಿರುವ ಕಾರಣ ಏನಾಗುತ್ತಿದೆ? ಯಾಕಾಗುತ್ತಿದೆ? ಪದೇ ಪದೆ ಆಗಲು ಕಾರಣವೇನು? ಎಂಬ ಗೊಂದಲ ಮೂಡಿಸಿ, ಪ್ರೇಕ್ಷಕರನ್ನು ಯೋಚನೆಗೆ ಹಚ್ಚುತ್ತಾರೆ ಲೋಹಿತ್.

‘ರಾಕ್ಷಸ’ನಾಗಿ ಪ್ರಜ್ವಲ್ ದೇವರಾಜ್ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾರರ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ಬೇಬಿ ಆರ್ನಾ ಗಮನ ಸೆಳೆಯುತ್ತಾರೆ. ಸೋನಲ್ ಮೊಂಟೇರೊ, ಶೋಭರಾಜ್ ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಹಾಗೂ ಜೆಬಿನ್ ಜೇಕಬ್ ಛಾಯಾಗ್ರಹಣದ ಮೂಲಕ ಹಾರರ್ ಸಂಚಲನ ಸೃಷ್ಟಿಸಿ, ಪ್ರೇಕ್ಷಕರನ್ನು ಹೆದರಿಸುವಲ್ಲಿ ಗೆದ್ದಿದ್ದಾರೆ. ಹಾರರ್, ಸಸ್ಪೆನ್ಸ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ‘ರಾಕ್ಷಸ’ ಇಷ್ಟವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net