

ಬೆಂಗಳೂರು: ‘ಫಸ್ಟ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ‘ರಾಜು ಜೇಮ್ಸ್ ಬಾಂಡ್’. ದೀಪಕ್ ಮಧುವನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಟೀಸರ್ ಹಾಗೂ ‘ಬೇಕಿತ್ತಾ ಬೇಕಿತ್ತಾ’ ಸಾಂಗ್ ಮೂಲಕ ಗಮನಸೆಳೆದಿರುವ ಈ ಸಿನಿಮಾದ ಮತ್ತೊಂದು ರೊಮ್ಯಾಂಟಿಕ್ ಹಾಡು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ‘ಕಣ್ಮಣಿ ಇಷ್ಟ ನಂಗೆ ನಿನ್ನ ಮುದ್ದು ಕೀಟಲೆ’ ಎಂದು ಸಾಗುವ ಗೀತೆಯನ್ನು ಜ್ಯೋತಿ ವ್ಯಾಸರಾಜ್ ರಚಿಸಿದ್ದಾರೆ. ರಿದಂಮಿಕ್ ಆಗಿ ಮೂಡಿಬಂದಿರುವ ಈ ಹಾಡಿಗೆ ಜೆ.ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಗುರುನಂದನ್ ಹಾಗೂ ಮೃದುಲಾ ಹೆಜ್ಜೆ ಹಾಕಿದ್ದಾರೆ. ಲಂಡನ್‌ನ ವಿವಿಧ ಭಾಗಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಗುರುನಂದನ್, ‘ಈ ಹಾಡಿನಲ್ಲಿ ಚೆನ್ನಾಗಿ ನೃತ್ಯ ಮಾಡಿದ್ದೇನೆ ಎಂದರೆ ಅದಕ್ಕೆ ಮುರಳಿ ಮಾಸ್ಟರ್ ಕಾರಣ. ನಮ್ಮ ಚಿತ್ರ ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗ ಬೇಕಿತ್ತು. ದೊಡ್ಡ ಎರಡು ಚಿತ್ರಗಳು ಅದೇ ಸಮಯಕ್ಕೆ ರಿಲೀಸ್ ಆಗಿರುವುದರಿಂದ ಹಾಗಾಗಿ ಮುಂದೂಡಿದ್ದೆವು. ಈಗ ಫೆ.14ರಂದು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ನೇಪಾಳಿ ಭಾಷೆಗೆ ಚಿತ್ರದ ಹಕ್ಕುಗಳು ಮಾರಾಟವಾಗಿರುವುದು ಖುಷಿ ತಂದಿದೆ’ ಎಂದು ಸಂತಸ ಹಂಚಿಕೊಂಡರು. ಉಳಿದಂತೆ, ಸಾಧು ಕೋಕಿಲ, ಅಚ್ಯುತ್‌ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ತಾರಾ ಬಳಗದಲ್ಲಿದ್ದಾರೆ.