

ಶ್ರೀಕಾಂತ್ ಬೊಳ್ಳ, ಆಂಧ್ರ ಪ್ರದೇಶ ಮೂಲದ ಉದ್ಯಮಿ. ಹುಟ್ಟು ಅಂಧನಾಗಿದ್ದ, ಬಡ ಕೃಷಿಕ ಕುಟುಂಬದಿಂದ ಬಂದ ಯುವಕ. ಅಂಧನಾದ ಕಾರಣಕ್ಕೆ 10ನೇ ತರಗತಿಯ ಬಳಿಕ ವಿಜ್ಞಾನ ವಿಷಯದಲ್ಲಿ ಪಿಯು ಮಾಡಲು ಸಾಧ್ಯವಿಲ್ಲ ಎಂದ ಕಾಲೇಜಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿ, ಆರು ತಿಂಗಳ ಬಳಿಕ ಕಾಲೇಜು ಸೇರಿ, 12ನೇ ತರಗತಿಯಲ್ಲಿ ಶೇಕಡಾ 98ರಷ್ಟು ಅಂಕ ಪಡೆದ ಹಠವಾದಿ. ಐಐಟಿಯಲ್ಲಿ ಮತ್ತದೇ ಅಂಧತ್ವ ಅಡ್ಡ ಬಂದಾಗ, ಅಮೆರಿಕದ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಮೊದಲ ಅಂತಾರಾಷ್ಟ್ರೀಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಡೆದ ಗಟ್ಟಿಗ.
2018ರಲ್ಲಿ ಬೊಳ್ಳಾಂಟ್ ಇಂಡಸ್ಟ್ರೀಸ್ ಹೆಸರಿನಲ್ಲಿ ಕೈಗಾರಿಕೋದ್ಯಮ ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ, ನೂರಾರು ಕೋಟಿ ರೂ. ವಹಿವಾಟು ನಡೆಸುತ್ತಿರುವ ಖ್ಯಾತಿ ಶ್ರೀಕಾಂತ್ಗೆ ಸಲ್ಲುತ್ತದೆ. ಇದೀಗ ಅವರದೇ ಹೆಸರಿನ "ಶ್ರೀಕಾಂತ್' ಚಿತ್ರದ ಮೂಲಕ ಬೊಳ್ಳ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ತುಷಾರ್ ಹೀರಾನಂದಾನಿ.
"ಶಾಹಿದ್', "ಅಲೀಗಢ್'ನಂತಹ ಬಯೋಪಿಕ್ಗಳಲ್ಲಿ ನಟಿಸಿರುವ ರಾಜಕುಮಾರ್ ರಾವ್ ಈ ಚಿತ್ರದಲ್ಲಿ ಶ್ರೀಕಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಕುತೂಹಲ ಮೂಡಿಸುವಂತಿದೆ. "ಶ್ರೀಕಾಂತ್' ಚಿತ್ರ ಇದೇ ಮೇ 10ರಂದು ತೆರೆಗೆ ಬರಲಿದೆ.