

ಬೆಂಗಳೂರು: ನಟ ಸಾರ್ವಭೌಮ ಡಾ.ರಾಜಕುಮಾರ್ ನಟನೆಯಲ್ಲಿ ಉತ್ಸಾಹಿ ಹಾಗೂ ಚೈತನ್ಯದ ಚಿಲುಮೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಪ್ರತಿ ಸಿನಿಮಾದಲ್ಲೂ ಮೊದಲ ಚಿತ್ರವೆಂಬಂತೆಯೇ ನಟಿಸುತ್ತಿದ್ದರು. ಇಂತಹ ಉತ್ಸಾಹಿ ಅಣ್ಣಾವ್ರ ತಮ್ಮ 70ನೇ ವಯಸ್ಸಿನಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಾಯಕನಾಗಿ ಮಿಂಚಿದ್ದರು. ಅದೇ ‘ಶಬ್ದವೇಧಿ’. ಇದು ರಾಜಕುಮಾರ್ ಅವರ ಕೊನೆಯ ಸಿನಿಮಾ. ಇನ್ನು, 1994ರಲ್ಲಿ ತೆರೆಕಂಡಿದ್ದ ‘ಗಂಧದಗುಡಿ-2’ ಚಿತ್ರದಲ್ಲಿ ನಟಿಸಿದ್ದ ಅಣ್ಣಾವ್ರ, ಆರು ವರ್ಷಗಳ ಬಳಿಕ ‘ಶಬ್ದವೇಧಿ’ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ‘ಶಬ್ದವೇಧಿ’ಯಲ್ಲಿ ಎಸ್.ನಾರಾಯಣ್ ಮೊದಲ ಬಾರಿಗೆ ರಾಜಕುಮಾರ್ ಅವರಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ಈ ಸಿನಿಮಾ ಮೂಲಕ ಇಂದಿಗೂ ಕಾಡುತ್ತಿರುವ ಡ್ರಗ್ಸ್ ಮಾಫಿಯಾದ ವಿರುದ್ಧ 2000ರಲ್ಲೇ ಧ್ವನಿ ಎತ್ತಲಾಗಿತ್ತು. ಇದೇ ಫೆಬ್ರವರಿಯಲ್ಲಿ ಸಿನಿಮಾ ಬಿಡುಗೆಯಾದ 25ನೇ ವರ್ಷಾಚರಣೆ ಸಂಭ್ರಮದಲ್ಲಿ ‘ಶಬ್ದವೇಧಿ’ಯನ್ನು ಹಲವೆಡೆ ರಿ-ರಿಲೀಸ್ ಮಾಡಲಾಗಿತ್ತು. ವಿಶೇಷ ಅಂದರೆ, ಮರುಬಿಡುಗಡೆಯಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನವಾಗಿತ್ತು.
ಮೊದಲ ಭೇಟಿಯಲ್ಲೇ ಅಪ್ಪುಗೆ: ಡಾ. ರಾಜಕುಮಾರ್‌ರನ್ನು ಮೊದಲ ಬಾರಿ ಭೇಟಿಯಾದ ಬಗ್ಗೆ ನಿರ್ದೇಶಕ ಎಸ್. ನಾರಾಯಣ್, ‘ನನ್ನ ಮೊದಲ ನಿರ್ದೇಶನದ ‘ಚೈತ್ರದ ಪ್ರೇಮಾಂಜಲಿ’ ಬಿಡುಗಡೆಗೂ ಮುನ್ನವೇ ಹಾಡುಗಳು ತುಂಬಾ ಸದ್ದು ಮಾಡಿದ್ದವು. ಹಂಸಲೇಖ ಅವರು ಆ ಹಾಡುಗಳನ್ನು ಗುನುಗುವುದನ್ನು ಅಣ್ಣಾವ್ರ ಕೇಳಿಸಿಕೊಂಡಿದ್ದಾರೆ. ಹಾಗೆಯೇ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬೆಂಗಳೂರಿನ ಸ್ವಸ್ತಿಕ್ ಥಿಯೇಟರ್‌ನಲ್ಲಿ ವೀಕ್ಷಿಸಿ, ಹೊರಬಂದವರೇ ನಿರ್ದೇಶಕರನ್ನು ಕಾಣಬೇಕು ಅಂದಿದ್ದರಂತೆ. ನನಗೆ 15 ದಿನಗಳ ಬಳಿಕ ಆ ವಿಷಯ ಗೊತ್ತಾಯಿತು. ಕೂಡಲೇ ಅವರ ಮನೆಗೆ ಹೋದೆ. ಅಣ್ಣಾವ್ರ ಬಂದವರೇ ನನ್ನನ್ನು ತಬ್ಬಿಕೊಂಡರು. ಆ ಕ್ಷಣ ಭಯ ಹಾಗೂ ಆನಂದ ಎರಡೂ ಆಯಿತು. ಬಳಿಕ ನನ್ನ ಸಿನಿಮಾವನ್ನು ಹೊಗಳಿದರು. ಅಣ್ಣಾವ್ರ ಜತೆಗಿನ ಮೊದಲ ಭೇಟಿಯನ್ನು ಮರೆಯಲು ಅಸಾಧ್ಯ’ ಎಂದು ಮಾಹಿತಿ ನೀಡುತ್ತಾರೆ.
ಶಬ್ದವೇಧಿ’ ಸಿಹಿ ಸುದ್ದಿ : ಇನ್ನು ‘ಶಬ್ದವೇಧಿ’ ಸಿನಿಮಾ ಪ್ರಾರಂಭವಾದ ಕುರಿತು, ‘ಅನುರಾಗದ ಅಲೆಗಳು’ ಶೂಟಿಂಗ್ ಸಮಯದಲ್ಲಿ ಪಾರ್ವತಮ್ಮನವರು ಸೆಟ್‌ಗೆ ಬಂದರು. ನನ್ನನ್ನು ಕರೆದು ಸ್ವೀಟ್ ತಿನಿಸಿ, ‘ನಿಮಗೊಂದು ಸಿಹಿಸುದ್ದಿ ಇದೆ. ಅಣ್ಣಾವ್ರಿಗೆ ಒಂದು ಕಥೆ ಮಾಡಿಕೊಳ್ಳಿ’ ಎಂದರು. ಅಣ್ಣಾವ್ರಿಗೆ ನಾನು ನಿರ್ದೇಶಿಸಬೇಕಾ? ಅಂತ ಕೇಳಿಯೇ ನಾನು ವಾರಗಳ ಕಾಲ ಬೇರೆ ಲೋಕದಲ್ಲಿದ್ದೆ. ಕೆಲ ದಿನಗಳ ಬಳಿಕ ಕಥೆಯ ಹುಡುಕಾಟ ನಡೆಯಿತು. 20-25 ಕಥೆಗಳನ್ನು ಹೇಳಿದ್ದೆ. ಕೊನೆಗೆ ‘ಶಬ್ದವೇಧಿ’ ಕಥೆ ಒಪ್ಪಿಕೊಂಡರು’ ಎಂದು ಮಾಹಿತಿ ನೀಡುತ್ತಾರೆ ನಾರಾಯಣ್.
ಅಣ್ಣಾವ್ರ ಶಿಸ್ತು, ಸಮಯಪ್ರಜ್ಞೆ: 70ರ ಹರೆಯದರಲ್ಲೂ ಡಾ. ರಾಜ್ ಅವರ ಶಿಸ್ತು, ಸಮಯಪ್ರಜ್ಞೆಯ ಬಗ್ಗೆ ನಿರ್ದೇಶಕ ನಾರಾಯಣ್, ‘ಹಿಮಾಲಯದ -9 ಡಿಗ್ರಿಯಲ್ಲಿ ನಾವು ಶೂಟ್ ಮಾಡಿದ್ದೇವೆ. ಎಲ್ಲರೂ ಚಳಿಗೂ ಬಿದ್ದು ಹೋಗುತ್ತಿದ್ದರು. ಆದರೆ ಅಣ್ಣಾವ್ರ ಮಾತ್ರ ಯಾವುದಕ್ಕೂ ಎದೆಗುಂದಿರಲಿಲ್ಲ. ಅದು ಯೋಗದಿಂದ ಸಿಗುವ ಲ ಎಂದಿದ್ದರು ಅವರು. ಇನ್ನು, ಶೂಟಿಂಗ್ ಸಮಯದಲ್ಲಿ ಅಣ್ಣಾವ್ರ ಶಿಸ್ತು, ಸಮಯಪ್ರಜ್ಞೆ ಪಾಲಿಸುತ್ತಿದ್ದರು. ನಮಗಿಂತ ಮುಂಚೆಯೇ ಲೊಕೇಷನ್‌ನಲ್ಲಿರುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಒಮ್ಮೆ ಸಾಂಗ್ ಶೂಟ್ ಮಾಡುವಾಗ ನಾನೊಬ್ಬನೇ ಹೋಗಿದ್ದನ್ನು ನೋಡಿ, ಅವರೂ ಬಂದಿದ್ದರು. ತುಂಬಾ ಸರಳವಾಗಿರುತ್ತಿದ್ದರು’ ಎಂದು ಹೇಳಿಕೊಳ್ಳುತ್ತಾರೆ. ವಿಶೇಷ ಅಂದರೆ ‘ಶಬ್ದವೇಧಿ’ ಚಿತ್ರದ ಆರು ಹಾಡುಗಳಲ್ಲಿ, ಐದು ಸಾಂಗ್‌ಗಳಿಗೆ ಡಾ. ರಾಜಕುಮಾರ್ ಅವರೇ ಧ್ವನಿಯಾಗಿದ್ದರು.