COOLIE Review; ಸ್ಟೈಲಿಶ್​ ಕೂಲಿಯ ಸೇಡಿನ ಕಥೆ

sdvasc
Published on

ಚಿತ್ರ: ಕೂಲಿ

ನಿರ್ದೇಶನ: ಲೋಕೇಶ್​ ಕನಗರಾಜ್​

ನಿರ್ಮಾಣ: ಕಲಾನಿಧಿ ಮಾರನ್​

ತಾರಾಗಣ: ರಜಿನಿಕಾಂತ್​, ನಾಗಾರ್ಜುನ, ಉಪೇಂದ್ರ, ರಚಿತಾ ರಾಮ್​, ಶ್ರುತಿ ಹಾಸನ್​, ಸೌಭಿನ್​ ಶಹೀರ್​, ಆಮಿರ್​ ಖಾನ್​, ಸತ್ಯರಾಜ್​, ಪೂಜಾ ಹೆಗ್ಡೆ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಅದು ವಿಶಾಖಪಟ್ಟಣಂ ಬಂದರು. ಅದನ್ನು 99 ವರ್ಷಗಳ ಉಸ್ತುವಾರಿ ವಹಿಸಿಕೊಂಡಿರುವ ಕಿಂಗ್​ಪಿನ್​ ಕಂಪನಿ ಮಾಲೀಕ ಸೈಮನ್​ (ನಾಗಾರ್ಜುನ್​) ಅನಧಿಕೃತ ದಂಧೆಗೆ ಉಪಯೋಗಿಸಿಕೊಳ್ಳುತ್ತಿರುತ್ತಾನೆ. ಆ ಬಂದರಿನಲ್ಲಿ ಬರೋಬ್ಬರಿ 14,400 ಕೆಲಸಗಾರರಿರುತ್ತಾರೆ. ಆಗಾಗ ಕೆಲವರು ಕಣ್ಮರೆಯಾಗುತ್ತಿರುತ್ತಾರೆ. ಅದೇ ಊರಿನ ರಾಜಶೇಖರ್​ (ಸತ್ಯರಾಜ್​) ಹೃದಯಾಘಾತ ಸಂಭವಿಸಿ ನಿಧನ ಹೊಂದುತ್ತಾನೆ. ಆತನ ಗೆಳೆಯ ಚೆನ್ನೆ$ನಲ್ಲಿ ದೇವ ಮ್ಯಾನ್ಷನ್​ ನಡೆಸುತ್ತಿರುವ ದೇವ (ರಜಿನಿಕಾಂತ್​) ಅಂತಿಮ ದರ್ಶನ ಪಡೆಯಲು ವಿಶಾಖಪಟ್ಟಣಂಗೆ ಬರುತ್ತಾನೆ. ಆಗ ರಾಜಶೇಖರನ ಮೂವರು ಪುತ್ರಿಯರಾದ ಪ್ರೀತಿ (ಶ್ರುತಿ ಹಾಸನ್​), ರೇವತಿ ಮತ್ತು ಪ್ರಿಯಾಗೆ ಬೆದರಿಕೆ ಇರುವುದು ದೇವನಿಗೆ ತಿಳಿಯುತ್ತದೆ. ಅವರ ರಕ್ಷಣೆಗೆ ಮುಂದಾಗುವ ದೇವನಿಗೆ ರಾಜಶೇಖರನದು ಕೊಲೆ ಎಂದು ತಿಳಿಯುತ್ತದೆ. ಹಾಗಾದರೆ ರಾಜಶೇಖರನ ಕೊಲೆಗೆ ಕಾರಣವೇನು? ಆತನ ಪುತ್ರಿಯರಿಗೆ ಜೀವ ಬೆದರಿಕೆ ಇರುವುದು ಯಾರಿಂದ? ಅದಕ್ಕೂ ಸೈಮನ್​ಗೂ ಸಂಬಂಧವಿದೆಯೇ? ಈ ಪ್ರಕರಣವನ್ನು ದೇವ ಹೇಗೆ ಭೇದಿಸುತ್ತಾನೆ? ಎಂಬುದೇ "ಕೂಲಿ' ಕಥೆ.

"ವಿಕ್ರಮ್​', "ಕೈದಿ', "ಲಿಯೋ' ಅಂತೆಲ್ಲ ಯೂನಿವರ್ಸ್​ ಸೃಷ್ಟಿಸುವತ್ತ ಸಾಗಿದ್ದ ನಿರ್ದೇಶಕ ಲೋಕೇಶ್​ ಕನಗರಾಜ್​, "ಕೂಲಿ'ಗಾಗಿ ಆ ಸರಣಿಯಿಂದ ಬ್ರೇಕ್​ ಪಡೆದಿದ್ದರು. ಭಾರತದ ವಿವಿಧ ಚಿತ್ರರಂಗಗಳ ಸ್ಟಾರ್​ಗಳನ್ನು ಒಂದೆಡೆ ಸೇರಿಸಿ ಮಾಸ್ಟರ್​ಪೀಸ್​ ಸೃಷ್ಟಿಸಲು ಹೊರಟಿದ್ದರು. ಆದರೆ, ಆ ದಾರಿಯಲ್ಲಿ ಎಡವಿದ್ದಾರೆ, ಅಲ್ಲಲ್ಲಿ ತೆಳವುತ್ತಲೇ ದಡ ಮುಟ್ಟಿದ್ದಾರೆ. 170 ನಿಮಿಷಗಳ ಸುದೀರ್ "ಕೂಲಿ'ಯಲ್ಲಿ ರಜಿನಿಕಾಂತ್​ ಎಂದಿನಂತೆ ಹಿರಿ ವಯಸ್ಸಿನಲ್ಲೂ ಕುಣಿದು, ಬಡಿದಾಡಿ ಸ್ಟೆ$ಲಿಶ್​ "ಕೂಲಿ'ಯಾಗಿ ಮಿಂಚಿದ್ದಾರೆ. ಅಷ್ಟೇ ಸ್ಟೆ$ಲಿಶ್​ ಆಗಿ ನಾಗಾರ್ಜುನ ಕೂಡ ಕಾಣಿಸಿಕೊಂಡಿದ್ದಾರೆ. ದಯಾಳ್​ ಪಾತ್ರದಲ್ಲಿ ಸೌಬಿನ್​ ಹೆಚ್ಚು ಇಷ್ಟವಾಗುತ್ತಾರೆ. ದ್ವೀತಿಯಾರ್ಧದಲ್ಲಿ ಬರುವ ಕಾಳೀಶ ಉಪೇಂದ್ರ ಎಂಟ್ರಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತದೆ. ಕಲ್ಯಾಣಿ ರಚಿತಾ ರಾಮ್​ ಕಥೆಯ ಅತಿದೊಡ್ಡ ಟ್ವಿಸ್ಟ್​ ಜತೆಗೆ ಸರ್​ಪೆಸ್​ ಪ್ಯಾಕೇಜ್​ ಎಂದರೂ ತಪ್ಪಾಗಲಾರದು. ಎಲ್ಲ ಸ್ಟಾರ್​ಗಳ ಇಂಟ್ರೋ ಕೂಡ ಥಿಯೇಟರ್​ನಲ್ಲಿ ಸದ್ದು ಮಾಡುತ್ತದೆ. ಅನಿರುದ್ಧ್​ ಹಾಡುಗಳಲ್ಲಿ ಈಗಾಗಲೇ ಹಿಟ್​ ಆಗಿರುವ "ಮೋನಿಕಾ', "ಜೈಲರ್​'ನ ಕಾವಾಲಯ್ಯಾವನ್ನೇ ಹೋಲುತ್ತದೆ. ಆದರೆ, ಸೌಬಿನ್​ ಮತ್ತು ಪೂಜಾ ಡಾನ್ಸ್​ ಹಾಡಿನ ಪ್ರಮುಖ ಆಕರ್ಷಣೆ. ಉಳಿದಂತೆ "ಪವರ್​ ಹೌಸ್​' ಮತ್ತು "ಚಿಕಿಟಿ' ಹಾಡುಗಳು ಇಷ್ಟವಾಗುತ್ತವೆ. ಒಟ್ಟಾರೆ ಈ "ಕೂಲಿ' "ಜೈಲರ್​'ಗಿಂತ ಕಡಿಮೆ, "ವೆಟ್ಟೈಯಾನ್​'ಗಿಂತ ಹೆಚ್ಚು. ಹೀಗಾಗಿ ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net