

ತಮಿಳು ನಟ ರಜಿನಿಕಾಂತ್‌ಗೆ ಕರ್ನಾಟಕ ಹಾಗೂ ಕನ್ನಡ ಭಾಷೆಯ ಮೇಲೆ ಮೊದಲಿನಿಂದಲೂ ವಿಶೇಷ ಒಲವು. ಮೂಲತಃ ಬೆಂಗಳೂರಿನವರಾದ ಅವರು ತಮಿಳು ಚಿತ್ರರಂಗದ ಮೂಲಕ ಜಗತ್ಪ್ರಸಿದ್ಧಿಯಾಗಿದ್ದಾರೆ. ಈ ಮಧ್ಯೆ, ಅವರು ಹುಟ್ಟೂರು ಬೆಂಗಳೂರು ಮರೆತಿಲ್ಲ. ಕೆಲ ತಿಂಗಳ ಹಿಂದೆಯಷ್ಟೇ ಮಹಾನಗರಕ್ಕೆ ಭೇಟಿ ನೀಡಿ, ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದರು. ಇದೀಗ ತಾವು ಓದಿರುವ ಹೈಸ್ಕೂಲ್‌ನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆ ದಿನಗಳ ಬಗ್ಗೆ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ. ಬ್ಯಾಂಕಾಂಕ್‌ನಿಂದ ವಿಶೇಷ ವಿಡಿಯೋ ಮಾಡಿರುವ ಅವರು, ಕನ್ನಡದಲ್ಲಿಯೇ ಸುಮಾರು 5 ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿದ್ದಾರೆ. ‘ನಾನು ಪ್ರಾಥಮಿಕ ವಿಭಾಗದ ಶಿಕ್ಷಣವನ್ನು ಗವಿಪುರಂನ ಸರ್ಕಾರಿ ಶಾಲೆಯಲ್ಲಿ ಓದಿದ್ದೆ. ಅಲ್ಲಿ ಕ್ಲಾಸಿಗೆ ನಾನೇ ಮಾನಿಟರ್. ಚೆನ್ನಾಗಿ ಓದುತ್ತೇನೆ ಎಂದು ನನ್ನನ್ನು ಇಂಗ್ಲೀಷ್ ಮೀಡಿಯಂಗೆ ಸೇರಿಸಿದರು. ಅದು ನನಗೆ ತುಂಬಾ ಕಷ್ಟವಾಗಿತ್ತು. ಹೇಗೋ 8 ಹಾಗೂ 9 ತರಗತಿ ಓದಿ ಮುಗಿಸಿದೆ. ಆದರೆ, 10ನೇ ತರಗತಿಯಲ್ಲಿ ಒಂದು ವಿಷಯದಲ್ಲಿ ನಾನು ಫೇಲಾಗಿದ್ದೆ. ಆ ಸಮಯದಲ್ಲಿ ಟೀಚರೊಬ್ಬರು ವಿಶೇಷ ತರಗತಿ ಮೂಲಕ ಪಾಠ ಹೇಳಿಕೊಟ್ಟು ಪಾಸಾಗಲು ಕಾರಣರಾದರು. ಬಳಿಕ ಕಾಲೇಜಿಗೆ ಸೇರಿಕೊಂಡೆ. ಚೆನ್ನಾಗಿ ಕಥೆ ಹೇಳುತ್ತೇನೆ, ನಟಿಸುತ್ತೇನೆ ಎಂದು ತಿಳಿದು ಶಿಕ್ಷಕರು ನಾಟಕದಲ್ಲಿ ಅಭಿನಯಿಸುವಂತೆ ಹೇಳಿದರು. ಆದಿ ಶಂಕರರು ಚಾಂಡಲಾನನ್ನು ಭೇಟಿಯಾಗುವ ನಾಟಕದಲ್ಲಿ ಚಾಂಡಲನಾ ಪಾತ್ರ ಮಾಡಿದೆ. ಈ ನಾಟಕ ಅಂತರ್ ಹೈಸ್ಕೂಲ್ ವಿಭಾಗದಲ್ಲಿ ಪ್ರಶಸ್ತಿ ಗಳಿಸುವುದರ ಜತೆಗೆ ನನಗೆ ಉತ್ತಮ ನಟ ಪ್ರಶಸ್ತಿ ತಂದುಕೊಟ್ಟಿತು. ಇದುವೇ ನನಗೆ ನಟನಾಗಲು ಸ್ಫೂರ್ತಿಯಾಯಿತು’ ಎಂದು ರಜಿನಿಕಾಂತ್ ತನ್ನ ಬಾಲ್ಯದ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.