ರಜನಿಕಾಂತ್ ಅಭಿನಯದ ಅಣ್ಣಾತ್ತೆ ಇಂದು ಬಿಡುಗಡೆ

Annathhe
Published on

ಸೂಪರ್​ಸ್ಟಾರ್ ರಜನಿಕಾಂತ್ ಸಿನಿಮಾ ಅಂದರೆ, ಅಲ್ಲಿ ನಿರೀಕ್ಷೆ ಆಕಾಶ ಮುಟ್ಟಿರುತ್ತದೆ. ಅಪಾರ ಅಭಿಮಾನಿ ಬಳಗ ಚಿತ್ರವನ್ನು ಬರಮಾಡಿಕೊಳ್ಳಲು ಕಾಯುತ್ತಿರುತ್ತಾರೆ. ಆದರೆ, ಕಳೆದ ಒಂದೂವರೆ ವರ್ಷದಿಂದ ತಲೈವ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ‘ಅಣ್ಣಾತ್ತೆ’ ಮೂಲಕ ಆಗಮಿಸಲು ಸಜ್ಜಾಗಿದ್ದಾರೆ. ಇಂದು (ಗುರುವಾರ) ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆ ಆಗುತ್ತಿದೆ.

2020ರ ಜನವರಿಯಲ್ಲಿ ರಜನಿಯ ‘ದರ್ಬಾರ್’ ಚಿತ್ರ ರಿಲೀಸ್ ಆಗಿತ್ತು. ಅದಾದ ಮೇಲೆ ಅವರು ‘ಅಣ್ಣಾತ್ತೆ’ ಚಿತ್ರವನ್ನು ಒಪ್ಪಿಕೊಂಡಿದ್ದರು. ಕೋವಿಡ್ ಏರಿಳಿತದ ಆತಂಕದ ಹಿನ್ನೆಲೆಯಲ್ಲಿ ಚಿತ್ರ ಸಾಕಷ್ಟು ತಡವಾಗಿ ಇದೀಗ ತೆರೆಗೆ ಬರುತ್ತಿದೆ. ಶಿವ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಭಾರತ ಹೊರತುಪಡಿಸಿ ವಿದೇಶಗಳ 1100 ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

ಅಮೆರಿಕವೊಂದರಲ್ಲಿಯೇ 677 ಚಿತ್ರಮಂದಿರಗಳು ಸಿಕ್ಕಿವೆ. ಜತೆಗೆ ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಸಿಂಗಾಪೂರ್, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರದಲ್ಲಿ ರಜನಿಕಾಂತ್​ಗೆ ನಯನತಾರಾ ಜೋಡಿಯಾಗಿದ್ದಾರೆ. ಕೀರ್ತಿ ಸುರೇಶ್, ಮೀನಾ, ಖುಷ್ಬೂ, ಪ್ರಕಾಶ್ ರೈ ಸೇರಿ ಹಲವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net