ನಾನು ಆ ಸಿನಿಮಾದಲ್ಲಿ ಸರಿಯಾಗಿ ನಟಿಸಲಿಲ್ಲ! ಸೂಪರ್​ ಸ್ಟಾರ್​ ರಜಿನಿಕಾಂತ್​ ಅಚ್ಚರಿ ಹೇಳಿಕೆ

Rajinikanth
Published on

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹೆಸರೇಳಿದರೆ ಸಾಕು ಅವರ ಸ್ಟೈಲ್​ ಕಣ್ಣ ಮುಂದೆ ಬರುತ್ತದೆ. ತಮ್ಮ ನಟನೆ ಹಾಗೂ ಸ್ಟೈಲ್​ನಿಂದಲೇ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಅವರ ಅಭಿಮಾನಿ. ಇಂತಹ ದಿಗ್ಗಜ ನಟನು ಕೂಡ ಒಂದೊಮ್ಮೆ ನಟನೆಯಲ್ಲಿ ಎಡವಿದ್ದರು. ಇದನ್ನು ಸ್ವತಃ ರಜಿನಿಕಾಂತ್​ ಅವರೇ ಒಪ್ಪಿಕೊಂಡಿದ್ದಾರೆ.

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್​ ಭಾಗ-1ರ ಬಿಡುಗಡೆ ಸಂದರ್ಭದಲ್ಲಿ ಟ್ರೈಲರ್​ ರಿಲೀಸ್​ ಈವೆಂಟ್​ಗೆ ರಜಿನಿ ಮತ್ತು ಕಮಲ್​ ಹಾಸನ್​ ಅತಿಥಿಯಾಗಿ ಬಂದಿದ್ದರು. ಈ ವೇಳೆ ಮಾತನಾಡಿದ್ದ ರಜಿನಿ, ಒಂದು ದೃಶ್ಯದಲ್ಲಿ ನಟಿಸಲು ಬರದಿದ್ದಾಗ ಕಮಲ್​ ಹಾಸನ್​ ಸಹಾಯ ಮಾಡಿದ್ದರು ಎಂದು ಬಹಿರಂಗಪಡಿಸಿದರು. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.​

ಮಣಿರತ್ನಂ ಅವರು ಭಾರತೀಯ ಚಲನಚಿತ್ರೋದ್ಯಮದಲ್ಲಿ ಲೆಜೆಂಡರಿ ನಿರ್ದೇಶಕ ಎಂದು ಕರೆಯುತ್ತಾರೆ. ಈ ಲೆಜೆಂಡ್ ನಿರ್ದೇಶನದಲ್ಲಿ 1991ರಲ್ಲಿ ತೆರೆಕಂಡ ದಳಪತಿ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಯಿತು. ಆದರೆ, ಈ ಚಿತ್ರದ ಶೂಟಿಂಗ್ ವೇಳೆ ರಜಿನಿ ನಟನೆ ನಿರ್ದೇಶಕರ ಅಸಮಧಾನಕ್ಕೆ ಕಾರಣವಾಗಿತ್ತು. ಬಳಿಕ ಮಣಿರತ್ನಂ ಅವರನ್ನು ಸಮಾಧಾನ ಮಾಡಲು ರಜಿನಿಕಾಂತ್ ಅವರು ಕಮಲ್ ಹಾಸನ್​​ ಸಹಾಯ ತೆಗೆದುಕೊಂಡರು.

ದಳಪತಿ ಸಿನಿಮಾದಲ್ಲಿ ರಾಜಕಾರಣಿಯೊಬ್ಬರಿಗೆ ಸವಾಲೆಸೆಯುವ ದೃಶ್ಯವಿದೆ. ಆ ದೃಶ್ಯ ಅದ್ಭುತವಾಗಿರಬೇಕು ಎಂದು ಮಣಿರತ್ನಂ ಒತ್ತಾಯಿಸಿದರು. ನಾನು ಲೆಕ್ಕವಿಲ್ಲದಷ್ಟು ಟೇಕ್‌ಗಳನ್ನು ತೆಗೆದುಕೊಂಡೆ. ಆದರೆ ಆ ದೃಶ್ಯ ಸರಿಯಾಗಿ ಬರಲಿಲ್ಲ ಎಂದು ಮಣಿರತ್ನಂ ಅಸಮಾಧಾನ ವ್ಯಕ್ತಪಡಿಸಿದರು. ನಾನು ತುಂಬಾ ನಿರಾಶೆಗೊಂಡೆ. ನಂತರ ನಾನು ನನ್ನ ಸ್ನೇಹಿತ ಕಮಲ್ ಹಾಸನ್ ಅವರನ್ನು ಕರೆದು ಸಲಹೆಯನ್ನು ಕೇಳಿದೆ. ಬಳಿಕ ಆ ದೃಶ್ಯ ಸೊಗಸಾಗಿ ಮೂಡಿಬಂತು. ಮಣಿರತ್ನಂ ಅವರು ಕೂಡ ಖುಷಿಯಾದರು. ಅದಕ್ಕಾಗಿ ನಾನು ಕಮಲ್ ಅವರಿಗೆ ಋಣಿಯಾಗಿರುತ್ತೇನೆ ಎಂದು ರಜಿನಿಕಾಂತ್​ ಆ ದಿನಗಳನ್ನು ಪೊನ್ನಿಯನ್​ ಸೆಲ್ವನ್​ ಟ್ರೈಲರ್​ ರಿಲೀಸ್​ ಈವೆಂಟ್​ ವೇಳೆ ನೆನಪಿಸಿಕೊಂಡರು. ಸದ್ಯ ಈ ವಿಡಿಯೋ ಮತ್ತೆ ವೈರಲ್ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ರಜನಿ ವೆಟ್ಟಯನ್ ಮತ್ತು ಕೂಲಿ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net