

ಬೆಂಗಳೂರು: ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ‘ಬಿಗ್ ಬಾಸ್’ ಖ್ಯಾತಿಯ ರಾಜೀವ್ ಅಭಿನಯದ ‘ಉಸಿರೇ ಉಸಿರೇ’. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದುವರೆದಿರಲಿಲ್ಲ. ಇನ್ನೇನು ಚಿತ್ರ ಮರತೇ ಹೋಗಬೇಕು ಎನ್ನುವಷ್ಟರಲ್ಲಿ ಚಿತ್ರ ಪುನಃ ಟೇಕಾಫ್ ಆಗಿದೆ. ಪ್ರದೀಪ್ ಯಾದವ್ ಈಗ ಚಿತ್ರವನ್ನು ನಿರ್ವಿುಸುತ್ತಿದ್ದು, ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಇತ್ತೀಚೆಗೆ, ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಪೋಸ್ಟರ್ ಬಿಡುಗಡೆ ಮಾಡಿರುವ ಸುದೀಪ್, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ನಾನು ಈವರೆಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಹೀರೋ ಆಗಲು 10 ವರ್ಷಗಳೇ ಬೇಕಾಯಿತು’ ಎನ್ನುತ್ತಾರೆ ರಾಜೀವ್. ‘ವಿಜಯ್ ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಸುದೀಪ್ ಸಾರ್ ಜತೆ ಒಮ್ಮೆ ಕಾರಿನಲ್ಲಿ ಬರುತ್ತಿದ್ದಾಗ, ‘ಉಸಿರೇ ಉಸಿರೇ’ ಹಾಡು ಪ್ರಸಾರವಾಗುತ್ತಿತ್ತು. ನಿರ್ದೇಶಕರಿಗೆ ಫೋನ್ ಮಾಡಿ, ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಚೆನ್ನಾಗಿರುತ್ತದೆ ಎಂದೆ. ತಕ್ಷಣವೇ ನೊಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕೌಟ್ ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕು ವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ’ ಎಂದರು.
ಹೆಸರೇ ಹೇಳುವಂತೆ ಇದೊಂದು ಪಕ್ಕಾ ಪ್ರೇಮಕಥೆ ಇರುವ ಚಿತ್ರ. ಈ ಕುರಿತು ಮಾತನಾಡುವ ನಿರ್ದೇಶಕ ವಿಜಯ್, ‘ಅಮರಪ್ರೇಮಿಗಳು ಎಂದರೆ ರೋಮಿಯೋ - ಜೂಲಿಯಟ್, ಸಲೀಂ - ಅನಾರ್ಕಲಿ ಹೆಸರು ನೆನಪಾಗುವುದು ಸಹಜ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಕಥಾನಾಯಕ - ನಾಯಕಿಯನ್ನು ಈ ಸಾಲಿಗೆ ಸೇರಿಸುತ್ತಾರೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ. ‘ಉಸಿರೇ ಉಸಿರೇ’ ಚಿತ್ರದಲ್ಲಿ ರಾಜೀವ್ಗೆ ನಾಯಕಿಯಾಗಿ ಶ್ರೀಜಿತ ಘೊಷ್ ನಟಿಸುತ್ತಿದ್ದಾರೆ. ತೆಲುಗು ನಟ ಅಲಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದರೆ, ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.