

ಬೆಂಗಳೂರು: ‘ರಾಜಸ್ಥಾನದಿಂದ ಬಂದ ನನಗೆ ಸ್ಯಾಂಡಲ್‌ವುಡ್ ಮೊದಲ ಅವಕಾಶ ನೀಡಿದ್ದು, ಮುಂದೆಯೂ ನೀಡಲಿದೆ. ಹಾಗಾಗಿ, ಬೆಂಗಳೂರಿನಲ್ಲಿಯೇ ನೆಲೆವೂರಿ, ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವೆ. ನಮ್ಮ ಕುಟುಂಬಕ್ಕೂ ಇಲ್ಲಿರುವುದು ತುಂಬಾ ಇಷ್ಟ. ಬೆಂಗಳೂರು ನನಗೆ ಬದುಕು ನೀಡಿದೆ’. - ಇದು ‘ಬ್ಲಡಿ ಬಾಬು’ ಚಿತ್ರದ ನಟಿ ರಾಜಸ್ಥಾನ ಮೂಲದ ಸ್ಮಿತಾ ಗೌರ್ ಕನ್ನಡ ಚಿತ್ರರಂಗದ ಬಗೆಗಿನ ಅಭಿಮಾನದ ನುಡಿ.
ಕಳೆದ ಎಂಟು ತಿಂಗಳ ಹಿಂದೆಯಷ್ಟೇ ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಸ್ಮಿತಾ ಗೌರ್ ಮೊದಲಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ವೇಳೆ, ‘ಬ್ಲಡಿ ಬಾಬು’ ತಂಡದ ಕಣ್ಣಿಗೆ ಬಿದ್ದಿದ್ದು, ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ರಾಜಸ್ಥಾನದಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿರುವ ಸ್ಮಿತಾ ಗೌರ್ ಅಭಿನಯದ ಮೊದಲ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರು ತನಕದ ಜರ್ನಿ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘ಎಂಟು ತಿಂಗಳ ಹಿಂದೆಯಷ್ಟೇ ರಾಜಸ್ಥಾನದಿಂದ ಬೆಂಗಳೂರಿಗೆ ಆಗಮಿಸಿದೆ. ಮೊದಲು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡೆ. ಈ ಸಮಯದಲ್ಲಿ ನನಗೆ ಈ ಹೊಸ ಚಿತ್ರಕ್ಕೆ ಅವಕಾಶ ಬಂತು. ಕುಟುಂಬದವರು ಕೂಡ ಒಪ್ಪಿಗೆ ನೀಡಿದರು. ಹಾಗಾಗಿ, ಅಭಿನಯಿಸಿದೆ. ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು, ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಕಾರಣಕ್ಕಾಗಿ ಒಂದಷ್ಟು ದಿನ ಟ್ರೇನಿಂಗ್ ಪಡೆದುಕೊಂಡೆ. ನಟನೆಗೆ ಒಂದು ತಿಂಗಳ ಕಾಲ ವರ್ಕ್‌ಶಾಪ್ ಮಾಡಿದ್ದೇವೆ. ಲಿಲ್ಲಿ ಎಂಬ ಶ್ರೀಮಂತ ಉದ್ಯಮಿಯ ಮಗಳ ಪಾತ್ರದಲ್ಲಿದ್ದೇನೆ. ಆ ಶ್ರೀಮಂತ ಕುಟುಂಬದ ಮೇಲೆ ಕೆಟ್ಟ ಕಣ್ಣು ಬೀಳುತ್ತವೆ. ಆ ಸಮಯದಲ್ಲಿ ಹೇಗೆ ಅದನ್ನು ಎದುರಿಸುತ್ತೇನೆ ಎಂಬುದು ನನ್ನ ಪಾತ್ರದ ಒನ್‌ಲೈನ್ ಸ್ಟೋರಿ’ ಎಂದು ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ದೋಸೆ ಇಷ್ಟ, ಕನ್ನಡ ಕಲಿಯುತ್ತಿದ್ದೇನೆ: ಬೆಂಗಳೂರು ಸುರಕ್ಷಿತ ಹಾಗೂ ಅನುಕೂಲ ವಾತಾವರಣ ನಗರ ಎನ್ನುವ ಸ್ಮಿತಾ ಇಲ್ಲಿಯೇ ನೆಲೆಯೂರಲು ಮುಂದಾಗಿದ್ದಾರೆ. ‘ನಾನು ಬೆಂಗಳೂರಿನಲ್ಲಿ ನೆಲೆಸುತ್ತೇನೆ. ಕನ್ನಡ ಭಾಷೆ ಅರ್ಥವಾಗುತ್ತಿದ್ದು, ಮಾತನಾಡುವುದು ಕಲಿಯುತ್ತಿದ್ದೇನೆ. ಸದ್ಯ ಮೊದಲ ಸಿನಿಮಾದಲ್ಲಿ ನಾನೇ ಡಬ್ಬಿಂಗ್ ಮಾಡಲಿಲ್ಲ. ಮುಂದಿನ ಚಿತ್ರದಲ್ಲಿ ಖಂಡಿತ ಡಬ್ಬಿಂಗ್ ನಾನೇ ಮಾಡುವೆ. ಹಾಗೆಯೇ ಬೆಂಗಳೂರು ನಗರ ಇಷ್ಟವಾಗಿದ್ದು, ಇಲ್ಲಿನ ದೋಸೆ ಫೇವರೆಟ್. ಸದ್ಯ ಕನ್ನಡದ ಎರಡು ಸ್ಕ್ರಿಪ್ಟ್ ಕೇಳಿದ್ದೇನೆ. ಮಾತುಕತೆ ಹಂತದಲ್ಲಿವೆ’ ಎಂದು ಸ್ಮಿತಾ ಖುಷಿ ಹಂಚಿಕೊಂಡರು.